ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಾರತೀಯ ರಾಯಭಾರಿ ಹತ್ಯೆಗೆ ಐಎಸ್ಐ 7 ಕೋಟಿ ಆಫರ್! (Afghan envoy | ISI | India | Jayant Prasad | Nawab Momand | Pakistan)
ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಜಯಂತ್ ಪ್ರಸಾದ್ ಅವರನ್ನು ಹತ್ಯೆಗೈಯಲು ಪಾಕಿಸ್ತಾನದ ಐಎಸ್ಐ 1.5ಮಿಲಿಯನ್ ಡಾಲರ್‌ನ (ಸುಮಾರು 7.50 ಕೋಟಿ ರೂಪಾಯಿ) ಆಫರ್ ಅನ್ನು ಅಫ್ಘಾನ್ ಪತ್ರಕರ್ತರೊಬ್ಬರಿಗೆ ನೀಡಿರುವ ಸ್ಫೋಟಕ ಮಾಹಿತಿಯೊಂದು ಬಹಿರಂಗಗೊಂಡಿದೆ.

ಜಯಂತ್ ಅವರ ಹತ್ಯೆಗೆ 1.5 ಮಿಲಿಯನ್ ಡಾಲರ್ ಹಾಗೂ ಬಲೂಚಿ ಮುಖಂಡ ಬ್ರಾಹ್ಮಡಾಗ್ ಬುಕ್ತಿ ಅವರ ಹತ್ಯೆಗೆ 0.8ಮಿಲಿಯನ್(3.60 ಕೋಟಿ ರೂಪಾಯಿ) ಡಾಲರ್ ಆಫರ್ ಅನ್ನು ಐಎಸ್ಐ ನೀಡಿರುವುದಾಗಿ ಪಂಜಾಬ್ ಮೂಲದ ಟೆಲಿವಿಷನ್ ನೆಟ್ವರ್ಕ್ ಪ್ರಸಾರ ಮಾಡಿರುವ ಸಂದರ್ಶನದಲ್ಲಿ ಪತ್ರಕರ್ತ ನವಾಬ್ ಮೊಮಾಂಡ್ ಹೊರಹಾಕಿದ್ದಾರೆ.

ಅಫ್ಘಾನಿಸ್ತಾನದ ಜನಪ್ರಿಯ ಟೊಲೋ ಟಿವಿ, ರೇಡಿಯೋ, ಅಫ್ಘಾನಿಸ್ತಾನದ ಮೊದಲ ಎಫ್ಎಂ ಅರ್ಮಾನ್ ರೇಡಿಯೋ ಸೇರಿದಂತೆ ಹಲವಾರು ಪ್ರಮುಖ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಿದ್ದ ನವಾಬ್ ಈ ಮಾಹಿತಿ ತಿಳಿಸಿದ್ದು, ಬುಕ್ತಿಯನ್ನು ಯಾವ ದಿನ ಕೊಲ್ಲುತ್ತೀರೋ ಆ ದಿನ ನಿಮ್ಮ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ಐಎಸ್ಐ ತಿಳಿಸಿರುವುದಾಗಿ ವಿವರಿಸಿದ್ದಾರೆ.

ಆದರೆ ಪಠಾಣ್ ಸಂಸ್ಕೃತಿ ಒಬ್ಬ ವ್ಯಕ್ತಿಯನ್ನು ರಕ್ಷಿಸುವುದಾಗಿದೆ ವಿನಃ ಕೊಲ್ಲುವುದಲ್ಲ ಎಂದು ಹೇಳಿರುವ ನವಾಬ್, ತಾನು ಐಎಸ್ಐನ ಆಫರ್ ಅನ್ನು ತಿರಸ್ಕರಿಸಿರುವುದಾಗಿ ಹೇಳಿದ್ದಾರೆ. ಆದರೂ ಕೂಡ ಐಎಸ್ಐ ಅವರನ್ನು ಕೊಲ್ಲಲು ಸುಮಾರು ಒಂದು ತಿಂಗಳ ಕಾಲ ಅಂತಿಮ ಗಡುವು ನೀಡಿ ಸಾಕಷ್ಟು ಒತ್ತಡ ಹೇರಿರುವುದಾಗಿ ಸುಮಾರು 30 ನಿಮಿಷಗಳ ಕಾಲ ಪ್ರಸಾರವಾದ ಸಂದರ್ಶನದಲ್ಲಿ ಐಎಸ್ಐನ ಮುಖವಾಡವನ್ನು ಬಿಚ್ಚಿಟ್ಟಿದ್ದರು.

ಏತನ್ಮಧ್ಯೆ ನವಾಬ್ ತನ್ನ ಆದೇಶವನ್ನು ಪಾಲಿಸಲು ಒಪ್ಪದಿದ್ದಾಗ, ನಿನ್ನನ್ನು ಅಪಹರಿಸಿ, ನಿನ್ನ ಇಡೀ ಕುಟುಂಬವನ್ನೇ ನಾಶ ಮಾಡುವುದಾಗಿ ಬೆದರಿಕೆ ಒಡ್ಡಿದ್ದಂತೆ. ಅದರಿಂದಾಗಿ ನವಾಬ್ ಹಾಗೂ ಕುಟುಂಬ ಕಾಬೂಲ್‌ನಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆದಾಡುತ್ತಿರುವುದಾಗಿ ತನ್ನ ಅತಂತ್ರ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸಂಬಂಧಿತ ಲೇಖನಗಳು