ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್ - ನಾವು ಮಾಡಿದ್ದೇ ಸರಿ: ಅಮೆರಿಕ (Indian students | radio tagging | Tri Valley University | US,)
ಕ್ಯಾಲಿಫೋರ್ನಿಯಾದ ಟ್ರೈವ್ಯಾಲಿ ವಿವಿಯಲ್ಲಿನ ಕೆಲವು ಭಾರತೀಯ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್ ಅಳವಡಿಸಿರುವ ಕ್ರಮವನ್ನು ಭಾರತದ ತೀವ್ರ ವಿರೋಧದ ನಡುವೆಯೇ ಅಮೆರಿಕ ಬಲವಾಗಿ ಸಮರ್ಥಿಸಿಕೊಂಡಿದೆ. ಇದು ವೀಸಾ ವಂಚನೆಯ ಪ್ರಕರಣವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ.

'ವಲಸೆ ಮತ್ತು ವೀಸಾ ವಂಚನೆಯ ಆರೋಪವನ್ನು ನಾವು ಗಂಭೀರವಾಗಿ ಪರಿಗಣಿಸಿರುವುದಾಗಿ' ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ಪಿ.ಜೆ.ಕ್ರೌಲೆ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಟ್ರೈವ್ಯಾಲಿಯಲ್ಲಿನ ಭಾರತದ ವಿದ್ಯಾರ್ಥಿಗಳ ಕಾಲಿಗೆ ರೇಡಿಯೋ ಕಾಲರ್ ತೊಡಿಸಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಅವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಗಿದೆಯೇ ಎಂಬ ಪ್ರಶ್ನೆಗೆ ಕ್ರೌಲೆ ಆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದರು.

ಇಲ್ಲಿ ಸುಮಾರು 1,555 ವಿದ್ಯಾರ್ಥಿಗಳು ಅತಂತ್ರ ಸ್ಥಿತಿ ಅನುಭವಿಸುತ್ತಿದ್ದಾರೆ. ಇದರಲ್ಲಿ ಹೆಚ್ಚಿನವರು ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಇವರು ವಲಸೆ ಕಾಯ್ದೆಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗಡಿಪಾರುಗೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ.

ವೀಸಾ ಹಾಗೂ ವಲಸೆ ದಾಖಲೆಗಳ ಸಮಸ್ಯೆಯಿಂದಾಗಿ ಕೆಲವು ವಿವಿಗಳಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆಗೆದುಹಾಕಲಾಗಿದೆ. ಟ್ರೈವ್ಯಾಲಿ ವಿವಿಯನ್ನು ಮುಚ್ಚಲಾಗಿದೆ. ಆದರೆ ಕೆಲವು ವಿದ್ಯಾರ್ಥಿಗಳ ಕಾಲಿಗೆ ಜಿಪಿಆರ್ಎಸ್ ಇರುವ ಕಾಲರ್ ತೊಡಿಸಿ ಅಮಾನವೀಯ ರೀತಿಯಲ್ಲಿ ನಡೆಸಿಕೊಂಡಿತ್ತು. ಇದು ಅಮೆರಿಕ ಸರಕಾರದ ಕ್ರಮವಾಗಿದ್ದು,ನಮ್ಮನ್ನು ಕ್ರಿಮಿನಲ್ ರೀತಿಯಲ್ಲಿ ನಡೆಸಿಕೊಂಡಿರುವುದಾಗಿ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಘಟನೆ ಕುರಿತಂತೆ ನಾವು ಭಾರತೀಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇವೆ. ವಂಚನೆ ಕುರಿತಂತೆ ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ ತನಿಖೆ ನಡೆಸುತ್ತಿರುವುದಾಗಿ ಕ್ರೌಲೆ ತಿಳಿಸಿದ್ದಾರೆ.

ಅಮೆರಿಕದ ಈ ಅಮಾನವೀಯ ಕ್ರಮದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಕಾಲಿಗೆ ತೊಡಿಸಿರುವ ರೇಡಿಯೋ ಕಾಲರ್ ತೆಗೆದು ಹಾಕಿ, ಆ ರೀತಿ ನಡೆದುಕೊಂಡ ಅಧಿಕಾರಿಗಳ ವಿರುದ್ಧ ಅಮೆರಿಕ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಆದರೆ ಅಮೆರಿಕ ಇದೀಗ ತನ್ನ ಕ್ರಮವನ್ನೇ ಸಮರ್ಥಿಸಿಕೊಂಡಿದೆ.
ಸಂಬಂಧಿತ ಲೇಖನಗಳು