ಬ್ರಿಟನ್:ಸಾವಿರ ಅಡಿ ಎತ್ತರದಿಂದ ಬಿದ್ರೂ ಬದುಕಿದ ಪರ್ವತಾರೋಹಿ!
ಲಂಡನ್, ಬುಧವಾರ, 2 ಫೆಬ್ರವರಿ 2011( 09:33 IST )
ಸ್ಕಾಟಿಷ್ ಪರ್ವತ ಏರಿದ ಬ್ರಿಟನ್‌ನ ಪರ್ವತಾರೋಹಿಯೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಸುಮಾರು ಒಂದು ಸಾವಿರ ಅಡಿ ಎತ್ತರದಿಂದ ಕೆಳ ಬಿದ್ದು, ಪವಾಡ ಸದೃಶ ಎಂಬಂತೆ ಆತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಸ್ಕಾಟಿಷ್‌ನ ಸುರ್ರ್ ಚೋನ್ನಿಚ್ ಮೊರ್ ಪರ್ವತದ ತುದಿಗೆ (3589 ಅಡಿ) ಏರುತ್ತಿರುವ ಸಂದರ್ಭದಲ್ಲಿ ಆಡಂ ಪೊಟ್ಟೆರ್(35) ಇಳಿಜಾರು ಪ್ರದೇಶದಲ್ಲಿ ಕಾಲುಜಾರಿದ ಪರಿಣಾಮ ಸುಮಾರು ಒಂದು ಸಾವಿರ ಅಡಿ ಆಳಕ್ಕೆ ಕೆಳಬಿದ್ದಿದ್ದ.
ಅಚ್ಚರಿ ಎಂಬಂತೆ ಆಡಂ ಪ್ರಾಣಾಪಾಯದಿಂದ ಪಾರಾಗಿದ್ದ. ಏತನ್ಮಧ್ಯೆ ಹೆಲಿಕಾಪ್ಟರ್ ರಕ್ಷಣಾ ಪಡೆ ಕೂಡಲೇ ಆತನನ್ನು ಪತ್ತೆ ಹಚ್ಚಿ ಕರೆ ತಂದಿರುವುದಾಗಿ ದಿ ಸನ್ ವರದಿ ಮಾಡಿದೆ.
ನಂತರ ಪೊಟ್ಟೆರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾನು ಪರ್ವತ ಏರುತ್ತಿದ್ದ ಸಂದರ್ಭದಲ್ಲಿ ಮಂಜುಗಡ್ಡೆಯಿಂದಾಗಿ ಕಾಲು ಜಾರಿತ್ತು ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾನೆ.
ಕಾಲು ಜಾರಿದ ಕೂಡಲೇ ಒಂದೇ ಸಮನೆ ಕೆಳಕ್ಕೆ ಜಾರಿದ್ದೆ, ನಾನು ನನ್ನ ದೇಹವನ್ನು ತುಂಬಾ ಸಮತೋಲನದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುವ ಮೂಲಕ ವೇಗವನ್ನು ತಗ್ಗಿಸುವ ಪ್ರಯತ್ನ ಮಾಡಿದ್ದೆ. ಅಷ್ಟರಲ್ಲಿ ಇಳಿಜಾರು ಪ್ರದೇಶದಲ್ಲಿ ತಾನು ಬಿದ್ದಿದ್ದೆ ಎಂದು ವಿವರಿಸಿದ್ದಾನೆ. ಒಂದು ಹಂತದಲ್ಲಿ ತಾನು ತನ್ನ ಬದುಕು ಮುಗಿಯಿತು ಅಂತ ಭಾವಿಸಿದ್ದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿರುವ ಆಡಂ, ಸಣ್ಣ ಪ್ರಮಾಣದಲ್ಲಿ ಬೆನ್ನು ಮೂಳೆ ನೋವಾಗಿರುವುದಾಗಿ ಹೇಳಿದ್ದಾನೆ.