ತನ್ನನ್ನು ತಾನು ದೇವರು ಎಂದು ಸ್ವಯಂ ಘೋಷಿಸಿಕೊಂಡ ವ್ಯಕ್ತಿಯೊಬ್ಬನನ್ನು ಗೊಡ್ಡು ವಿಚಾರ ಮತ್ತು ಭ್ರಷ್ಟಾಚಾರ ಆರೋಪದಡಿಯಲ್ಲಿ ದೋಷಿ ಎಂದು ಸಾಬೀತಾದ ನಂತರ ಇರಾನ್ ಗಲ್ಲಿಗೇರಿಸಿರುವುದಾಗಿ ಫಾರಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಅಬ್ದುಲ್‌ರೆಜಾ ಘಾರಾಬಾಟ್ ಎಂಬ ಸ್ವಯಂಘೋಷಿತ ದೇವಮಾನವನ್ನು ಇರಾನ್‌ನ ನೈರುತ್ಯ ಪ್ರದೇಶದ ಅಹ್ವಾಜ್‌ನಲ್ಲಿ ಕಳೆದ ಬುಧವಾರ ಗಲ್ಲಿಗೇರಿಸಲಾಗಿದೆ. ಆ ನಿಟ್ಟಿನಲ್ಲಿ ಜನವರಿ 1ರಿಂದ ಈವರೆಗೆ ಇರಾನ್ 67 ಮಂದಿಯನ್ನು ನೇಣಿಗೇರಿಸಿದಂತಾಗಿದೆ ಎಂದು ವರದಿ ವಿವರಿಸಿದೆ.
ಅಬ್ದುಲ್‌ರೆಜಾ ತುಂಬಾ ಕಾಲದಿಂದ ತನ್ನನ್ನು ತಾನು ದೇವರು ಎಂದು ಘೋಷಿಸಿಕೊಂಡಿದ್ದ. ಅಲ್ಲದೇ ಈತ ಕುಝೆಸ್ತಾನ ಪ್ರಾಂತ್ಯದಲ್ಲಿನ ಯುವ ಅರಬ್‌ರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದಾಗಿಯೂ ವರದಿ ಹೇಳಿದೆ.
ಗೊಡ್ಡು ಸಂಪ್ರದಾಯದ ಮೂಲಕ ಜನರನ್ನು ವಂಚಿಸುತ್ತಿದ್ದ ರೆಜಾನನ್ನು ಗಲ್ಲಿಗೇರಿಸುವ ಮೂಲಕ ಇರಾನ್ ಪ್ರಸಕ್ತ ಜನವರಿಯಿಂದ ಈವರೆಗೆ 67 ಜನರನ್ನು ಗಲ್ಲಿಗೇರಿಸಿದ್ದರೆ, 2010ರಲ್ಲಿ 179 ಜನರನ್ನು ಸಾರ್ವಜನಿಕವಾಗಿ ನೇಣಿಗೇರಿಸಲಾಗಿತ್ತು. 2009ರಲ್ಲಿ 388 ಜನರನ್ನು ಗಲ್ಲಿಗೇರಿಸಲಾಗಿತ್ತು ಎಂದು ವರದಿ ವಿವರಿಸಿದೆ.