2007 ನವೆಂಬರ್ 3ರಂದು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿ, ನ್ಯಾಯಾಧೀಶರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸುಪ್ರೀಂಕೋರ್ಟ್, ಮಾಜಿ ಅಧ್ಯಕ್ಷ ಮುಷರ್ರಫ್, ಮಿಲಿಟರಿ ವರಿಷ್ಠ ಅಶ್ಪಾಕ್ ಪರ್ವೆಜ್ ಕಯಾನಿ, ಮಾಜಿ ಪ್ರಧಾನಿ ಶೌಕತ್ ಅಜೀಜ್ ಹಾಗೂ ಹಲವು ಮಿಲಿಟರಿ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಅನ್ನು ಬುಧವಾರ ಜಾರಿಗೊಳಿಸಿದೆ.
ಹಾಲಿ ಮಿಲಿಟರಿ ವರಿಷ್ಠರೊಬ್ಬರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿರುವುದು ಪಾಕಿಸ್ತಾನದ ನ್ಯಾಯಾಂಗದ ಇತಿಹಾಸದಲ್ಲಿಯೇ ಮೊದನೆಯ ಪ್ರಕರಣವಾಗಿದೆ.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಇಫ್ತಿಕಾರ್ ಮುಹಮ್ಮದ್ ಚೌಧರಿ ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಅಂದಿನ ಅಧ್ಯಕ್ಷ ಮುಷರ್ರಫ್ ಅವರು ಏಕಾಏಕಿ ತುರ್ತುಪರಿಸ್ಥಿತಿ ಘೋಷಿಸಿದ್ದರು. ಅಷ್ಟೇ ಅಲ್ಲ ನ್ಯಾಯಾಧೀಶರನ್ನು ವಜಾಗೊಳಿಸಿ, ನ್ಯೂಸ್ ಚಾನೆಲ್‌ಗಳ ಸುದ್ದಿ ಪ್ರಸಾರವನ್ನು ನಿಷೇಧಿಸಿದ್ದರು.
ತುರ್ತು ಪರಿಸ್ಥಿತಿ ಘೋಷಿಸಿದ ಕೂಡಲೇ ಅಬ್ದುಲ್ ಹಮೀದ್ ಡೋಗಾರ್ ಅವರನ್ನು ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಿಸಿ, ವಜಾಗೊಳಿಸಿದ ಮುಖ್ಯನ್ಯಾಯಮೂರ್ತಿ ಚೌಧರಿ ಅವರನ್ನು ಗೃಹಬಂಧನದಲ್ಲಿ ಇರಿಸಿದ್ದರು.
ಪ್ರಾವಿಶನಲ್ ಕಾನ್ಸ್‌ಸ್ಟಿಟ್ಯೂಷನ್ ಆರ್ಡರ್ (ಪಿಸಿಒ) ಅಡಿಯಲ್ಲಿ ನ್ಯಾಯಾಧೀಶರುಯಾವುದೇ ಸಂವಿಧಾನ ಬಾಹಿರ ನಡವಳಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬುದಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಆ ನಿಟ್ಟಿನಲ್ಲಿ ಡೋಗಾರ್ ಅವರ ನೇಮಕ ನ್ಯಾಯಾಂಗ ನಿಂದನೆಯಾಗಿತ್ತು. ತದನಂತರ ಡೋಗಾರ್ ಸೇರಿದಂತೆ 11 ಮಂದಿ ನ್ಯಾಯಾಧೀಶರ ಕೋರ್ಟ್‌ಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಅಲ್ಲದೇ ಕೋರ್ಟ್ ಕ್ಷಮಾಪಣೆ ಕೂಡ ಕೇಳಿ. ಈ ಪ್ರಕರಣದ ವಿಚಾರಣೆಗೆ ಹಾಜರಾಗುವುದಾಗಿ ಹಮೀದ್ ಡೋಗಾರ್ ತಿಳಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ಒಂದು ವರ್ಷದಿಂದ ನಡೆಯುತ್ತಿದ್ದು, ಅದರ ತೀರ್ಪನ್ನು ಅಪೆಕ್ಸ್ ಕೋರ್ಟ್ ಬುಧವಾರ ನೀಡಿರುವುದಾಗಿ ಡಾನ್ ಟಿವಿ ವರದಿ ಮಾಡಿದೆ.