ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ಸದ್ಯಕ್ಕೆ ಪದತ್ಯಾಗ ಮಾಡಲಾರೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೊಸ್ನಿ ಪರ ಬೆಂಬಲಿಗರು ಮತ್ತು ವಿರೋಧಿ ಬಣದ ಪ್ರತಿಭಟನಾಕಾರರ ನಡುವಿನ ಹಿಂಸಾಚಾರ ಭುಗಿಲೆದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹೊಸ್ನಿ ಮುಬಾರಕ್ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಲೇಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರುವ ಬೆನ್ನಲ್ಲೇ, ಹೊಸ್ನಿ ಪರ ಬೆಂಬಲಿಗರು ಕೂಡ ಬೀದಿಗಿಳಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈಜಿಪ್ಟ್ ಸೇನಾ ಪಡೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದೆ ಎಂದು ಅಲ್ ಅರಾಬಿಯಾ ಟೆಲಿವಿಷನ್ ವರದಿ ಮಾಡಿದೆ.
ಪ್ರತಿಭಟನಾಕಾರರ ತೀವ್ರ ಒತ್ತಡದ ನಡುವೆಯೇ ಅಧ್ಯಕ್ಷ ಮುಬಾರಕ್ ಮಂಗಳವಾರ, ತನ್ನ ಅಧಿಕಾರಾವಧಿ ಸೆಪ್ಪೆಂಬರ್‌ಗೆ ಪೂರ್ಣಗೊಳ್ಳಲಿದ್ದು, ಆಸಂದರ್ಭದಲ್ಲಿಯೇ ತಾನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು. ಆದರೆ ಹೊಸ್ನಿ ಅವರು 30 ವರ್ಷಗಳ ಕಾಲ ಸರ್ವಾಧಿಕಾರ ನಡೆಸಿದ್ದು, ಅದು ಕೂಡಲೇ ಕೊನೆಗೊಳ್ಳಬೇಕು. ಆ ನಿಟ್ಟಿನಲ್ಲಿ ಹೊಸ್ನಿ ಅಧ್ಯಕ್ಷಗಾದಿಯಿಂದ ಕೆಳಗಿಳಿಯುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸುವ ಮೂಲಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಏತನ್ಮಧ್ಯೆ, ಪ್ರತಿಭಟನಾಕಾರರು ಚಳವಳಿಯನ್ನು ಕೈಬಿಡುವಂತೆ ಸೇನೆ ಮನವಿ ಮಾಡಿಕೊಂಡಿತ್ತು. ಆದರೆ ಮುಬಾರಕ್ ಬೆಂಬಲಿಗರು ಪ್ರತಿಭಟನಾಕಾರರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿರುವುದಾಗಿ ವರದಿ ತಿಳಿಸಿದೆ. ಇದಕ್ಕೆ ಪ್ರತಿಯಾಗಿ ಮುಬಾರಕ್ ವಿರೋಧಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಕೈರೋದ ಟಾಹ್ರಿರ್ ಸ್ಕ್ವೇರ್‌ನಲ್ಲಿ ಲಕ್ಷಾಂತರದ ಪ್ರತಿಭಟನಾಕಾರರು ನಡೆಸುತ್ತಿರುವ ಪ್ರತಿಭಟನೆ ಹತ್ತನೆ ದಿನಕ್ಕೆ ಕಾಲಿಟ್ಟಿದೆ. ಆದರೆ ಮುಬಾರಕ್ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಪರೋಕ್ಷವಾಗಿ ಹೇಳಿರುವುದು ಹಿಂಸಾಚಾರ ಭುಗಿಲೇಳಲು ಕಾರಣವಾಗಿದೆ. ಹತ್ತು ದಿನಗಳಲ್ಲಿ ಮಿಲಿಟರಿ ಗೋಲಿಬಾರ್ ಮತ್ತು ಘರ್ಷಣೆಯಲ್ಲಿ ಸುಮಾರು 150ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.