ಒಬಾಮಾಗೆ ಈಜಿಪ್ಟ್ ಸಂಸ್ಕೃತಿ ಗೊತ್ತಿಲ್ಲ:ಹೊಸ್ನಿ ತಿರುಗೇಟು
ಕೈರೋ, ಶನಿವಾರ, 5 ಫೆಬ್ರವರಿ 2011( 11:49 IST )
PTI
ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಈಜಿಪ್ಟ್ ಚಳವಳಿಗಾರರು ಶುಕ್ರವಾರದವರೆಗೆ ನೀಡಿದ್ದ ಗಡುವನ್ನು ಲೆಕ್ಕಿಸದ ಅಧ್ಯಕ್ಷ ಹೊಸ್ನಿ ಮುಬಾರಕ್, ತಾವು ಈ ಕೂಡಲೇ ಅಧಿಕಾರ ತ್ಯಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಈ ಹಿನ್ನೆಲೆಯಲ್ಲಿ ಜನಾಂದೋಲನ ಮತ್ತಷ್ಟು ತೀವ್ರಗೊಳ್ಳುವಂತಾಗಿದೆ.
ಕಳೆದ ಮೂರು ದಿನಗಳಿಂದ ಸರಕಾರದ ಪರ ಮತ್ತು ವಿರೋಧಿ ಗುಂಪುಗಳ ನಡುವೆ ನಡೆದ ಸಂಘರ್ಷದಿಂದ ಇಕ್ಕಟ್ಟಿಗೆ ಸಿಲುಕಿರುವ ಸೇನಾ ಪಡೆಯು ಹೇಗಾದರೂ ಮಾಡಿ ಈ ಚಳವಳಿಯನ್ನು ಶಮನ ಮಾಡಬೇಕೆಂದು ಟೊಂಕಟ್ಟಿ ನಿಂತಿದೆ. ಆದರೆ ಚಳವಳಿಗಾರರು ಶುಕ್ರವಾರವನ್ನು ನಿರ್ಗಮನದ ದಿನ ಎಂದು ಹೇಳಿ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು.
ಏತನ್ಮಧ್ಯೆ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮುಬಾರಕ್, ದೇಶದಲ್ಲಿ ಈಗ ಉಂಟಾಗಿರುವ ಪರಿಸ್ಥಿತಿ ತಲೆಚಿಟ್ಟು ಹಿಡಿಸಿದೆ. ಅಧಿಕಾರ ಸಾಕಾಗಿ ಹೋಗಿದೆ. ಆದರೆ ನಾನು, ಕೂಡಲೇ ಅಧಿಕಾರ ತ್ಯಜಿಸಿದರೆ ದೇಶ ಅರಾಜಕತೆಯಿಂದ ತತ್ತರಿಸುತ್ತದೆ ಎಂದು ಹೇಳಿದ್ದಾರೆ.
ನನ್ನನ್ನು ಟೀಕಿಸುವ ಜನರನ್ನು ನಾನು ಲೆಕ್ಕಿಸುವುದಿಲ್ಲ. ನನಗೆ ದೇಶವೇ ಮುಖ್ಯ. ಹಾಗಾಗಿ ದೇಶದ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದೇನೆ ಎಂದು ಅಂಗರಕ್ಷಕರ ಬೆಂಗಾವಲಿನಲ್ಲಿರುವ ಮುಬಾರಕ್ ಎರಡು ಟಿವಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದಾರೆ.
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಈಜಿಪ್ಟ್ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ನಿಮಗೆ ಈಜಿಪ್ಟ್‌ನ ಸಂಸ್ಕೃತಿ ಗೊತ್ತಿಲ್ಲ. ನಾನು ಅಧಿಕಾರದಿಂದ ಈಗ ಕೆಳಗಿಳಿದರೆ ಏನಾಗುತ್ತದೆ ಎಂಬದು ನಿಮಗೆ ತಿಳಿದಿಲ್ಲ ಎಂದಿದ್ದಾರೆ.