ಬ್ರಿಟನ್‌ನಲ್ಲಿ ತಲೆದೋರಿರುವ ಇಸ್ಲಾಂ ತೀವ್ರವಾದವನ್ನು ಮಟ್ಟಹಾಕಲು ಯೋಜನೆ ರೂಪಿಸಲು ಸಿದ್ದವಾಗಿರುವುದಾಗಿ ತಿಳಿಸಿರುವ ಪ್ರಧಾನಿ ಡೇವಿಡ್ ಕ್ಯಾಮರೂನ್, ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಬ್ರಿಟನ್‌ನ ಬಹುಸಂಸ್ಕೃತಿ ನೀತಿ ವಿಫಲವಾಗಿರುವುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಬ್ರಿಟನ್‌ನಲ್ಲಿನ ಜನಾಂಗೀಯ ಮತ್ತು ಅಲ್ಪಸಂಖ್ಯಾತ ಧರ್ಮದಲ್ಲಿನ ರೀತಿ-ನೀತಿಗಳಲ್ಲಿ ಬದಲಾವಣೆ ತರುವ ಸೂಚನೆ ನೀಡಿರುವ ಕ್ಯಾಮರೂನ್, ಪಾಶ್ಚಾತ್ಯ ಮೌಲ್ಯಗಳು ವಿಫಲವಾಗಿದೆ ಎಂದು ಮ್ಯೂನಿಚ್‌ನಲ್ಲಿ ಭದ್ರತಾ ಸಮ್ಮೇಳನದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಸಮಾನ ಹಕ್ಕು, ಕಾನೂನಿನ ಆಡಳಿತ, ವಾಕ್ ಸ್ವಾತಂತ್ರ್ಯ ಮತ್ತು ಕ್ರಿಯಾಶೀಲ ಪ್ರಜಾಪ್ರಭುತ್ವದ ಮೂಲಕ ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಳ್ಳಲು 'ಕ್ರಿಯಾಶೀಲ ಬಲಿಷ್ಠ ಉದಾರವಾದ' ವನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.
ಹಿಂದಿನಿಂದಲೂ ರೂಢಿಯಾಗಿ ಬಂದಿರುವ ಅವ್ಯವಸ್ಥೆಯಿಂದ ಹೊರಬರಲು ನಾವು ಬಯಸುವುದಾದರೆ ಇದು ಸೂಕ್ತ ಕಾಲ ಎಂದು ಈ ಸಂದರ್ಭದಲ್ಲಿ ಹೇಳಿದರು.
2005ರಲ್ಲಿ ಲಂಡನ್ನಿನ ಸಾರಿಗೆ ವ್ಯವಸ್ಥೆಯ ಮೇಲೆ ಸ್ವದೇಶಿ ಆತ್ಮಾಹುತಿ ದಳದ ನಾಲ್ವರಿಂದ ನಡೆದ ಭೀಕರ ದಾಳಿಯ ನಂತರ ಆಂತರಿಕ ರಕ್ಷಣೆಯ ಬಗ್ಗೆ ಬ್ರಿಟನ್ ಸರಕಾರ ವಿಶೇಷ ಮುತುವರ್ಜಿ ವಹಿಸಿದೆ. 52 ಜನರನ್ನು ಬಲಿತೆಗೆದುಕೊಂಡ ಈ ಆತ್ಮಹತ್ಯಾ ದಾಳಿಯ ನಂತರ ಮುಸಲ್ಮಾನರ ತೀವ್ರವಾದದ ಕುರಿತು ಕ್ಯಾಮರೂನ್ ಅವರು ದೀರ್ಘ ಭಾಷಣ ಮಾಡುತ್ತಿರುವು ಇದೇ ಮೊದಲು.
ರಾಷ್ಟ್ರದ ಬಹುಸಂಸ್ಕೃತಿ ವ್ಯವಸ್ಥೆಯ ಮೇಲೆ ನಂಬಿಕೆಯಿಟ್ಟು ವಿವಿಧ ಸಂಸ್ಕೃತಿಗಳಿಗೆ ನೆಲೆಗೊಳ್ಳಲು ಮುಕ್ತ ಅವಕಾಶ ಕಲ್ಪಿಸಿದ್ದೇವೆ. ರಾಷ್ಟ್ರಾಭಿಮಾನದ ಕೊರತೆ ಕೆಲವು ಯುವ ಮುಸಲ್ಮಾನರನ್ನು ತೀವ್ರವಾದದತ್ತ ಆಕರ್ಷಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.