ಮಾಂತ್ರಿಕ ದೀಕ್ಷಾ ಕಾರ್ಯಕ್ರಮದ ಅಂಗವಾಗಿ ನವಜಾತ ಗಂಡು ಮಗುವನ್ನು ಕಚ್ಚಿ ತಿನ್ನುತ್ತಿದ್ದ ನರಭಕ್ಷಸ ಅಪ್ಪನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಪುವಾ ನ್ಯೂಗಿನಿಯಾ ಎಂಬಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಪಶ್ಚಿಮ ಪ್ರಾಂತ್ಯದ ಟಾಬುಬಿಲ್ ನಗರದ ಹೊರವಲಯದಲ್ಲಿ ಮಗುವಿನ ಚೀತ್ಕಾರ ಕೇಳಿಬಂದಾಗ ಸ್ಥಳೀಯರು ಆ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ, ವ್ಯಕ್ತಿಯೊಬ್ಬ ಶಿಶುವನ್ನು ಕಚ್ಚಿ ತಿನ್ನುತ್ತಿದ್ದ. ಆ ಮಗುವಿನ ತಂದೆ ಕೂಡ ಆತನೇ ಎಂದು ಸ್ಥಳೀಯರು ತಿಳಿಸಿದ್ದಾರೆ. ಆ ದೃಶ್ಯವನ್ನು ಕಂಡು ರೊಚ್ಚಿಗೆದ್ದ ಜನರು ಅವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಆದರೆ ಬಲವಾದ ಗಾಯ ಮತ್ತು ರಕ್ತಸ್ರಾವದಿಂದ ಮಗುವನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಟಾಬುಬಿಲ್ ಪೊಲೀಸ್ ಕಮಾಂಡರ್ ಡೆಮಾಸ್ ಟಾಪಾ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವನ್ನು ಕೊಂದ ಗಂಡ ಮತ್ತು ಆತನಿಗೆ ಸಹಾಯ ಮಾಡಿದ ಹೆಂಡತಿಯನ್ನು ಬಂಧಿಸಿರುವುದಾಗಿ ಅವರು ಹೇಳಿದ್ದಾರೆ. ಇದೊಂದು ನಿಜಕ್ಕೂ ಆಘಾತಕಾರಿ ಘಟನೆ. ಸ್ಥಳೀಯ ಜನರು ಕೂಡ ಆಕ್ರೋಶಗೊಂಡಿರುವುದಾಗಿ ಟಾಪಾ ತಿಳಿಸಿರುವುದಾಗಿ ದಿ ಬ್ರಿಸ್ಬೇನ್ ಟೈಮ್ಸ್ ವರದಿ ಮಾಡಿದೆ.