ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೆಜ್ ಮುಷರ್ರಫ್ ಅವರು ಸಭೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಶೂ ಎಸೆದ ಘಟನೆ ಭಾನುವಾರ ಲಂಡನ್‌ನಲ್ಲಿ ನಡೆದಿದೆ. ಆದರೆ ಶೂ ಮುಷ್ ಅವರ ಮೇಲೆ ಬಿದ್ದಿಲ್ಲ ಎಂದು ಮಾಧ್ಯಮದ ವರದಿ ತಿಳಿಸಿದೆ.
ಇಲ್ಲಿನ ವಾಲ್ಥ್‌ಮ್‌ಸೌ ಎಂಬಲ್ಲಿ ಪಾಕಿಸ್ತಾನಿ ಮೂಲದ ಜನರನ್ನು ಉದ್ದೇಶಿಸಿ ಮುಷರ್ರಫ್ ಅವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ ವ್ಯಕ್ತಿಯೊಬ್ಬ ಏಕಾಏಕಿ ಶೂ ಎಸೆದಿರುವುದಾಗಿ ವರದಿ ಹೇಳಿದೆ.
ಆದರೆ ಶೂ ಮುಷರ್ರಫ್ ಅವರ ಮೇಲೆ ಬೀಳದೆ, ಅವರ ಮುಂಭಾಗದಲ್ಲಿ ಬಿದ್ದಿರುವುದಾಗಿ ಜಿಯೋ ನ್ಯೂಸ್ ಚಾನೆಲ್ ವರದಿ ಮಾಡಿದೆ. ಕೂಡಲೇ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಗಳು ಹೊರಗೆ ಕರೆದೊಯ್ದಿರುವುದಾಗಿ ವರದಿ ತಿಳಿಸಿದೆ.
ಆಲ್ ಪಾಕಿಸ್ತಾನಿ ಮುಸ್ಲಿಮ್ ಲೀಗ್ ಈ ಸಮಾರಂಭವನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ಸುಮಾರು 1,500 ಮಂದಿ ಹಾಜರಿದ್ದರು. ಅಲ್ಲದೇ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಮತ್ತಿಬ್ಬರು ಕೂಡ ಮುಷ್ ಅವರ ಸಭೆಗೆ ಪ್ರತಿಭಟನೆ ವ್ಯಕ್ತಪಡಿಸಿರುವುದಾಗಿ ಹೇಳಿದೆ.
ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಪ್ರವಾಹದಿಂದಾಗಿ ತತ್ತರಿಸುತ್ತಿದ್ದ ಸಂದರ್ಭದಲ್ಲಿಯೇ ಹಾಲಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಲಂಡನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ವ್ಯಕ್ತಿಯೊಬ್ಬ ಜರ್ದಾರಿ ಮೇಲೂ ಶೂ ಎಸೆದಿದ್ದ ಘಟನೆಯನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.