ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ ಸಂಚು ಮುಷ್‌ಗೆ ತಿಳಿದಿತ್ತು: ತನಿಖಾ ತಂಡ (Benazir Bhutto | Musharraf | reveals probe | Pakistan | Tehreek-e-Taliban)
ಭುಟ್ಟೋ ಹತ್ಯೆ ಸಂಚು ಮುಷ್‌ಗೆ ತಿಳಿದಿತ್ತು: ತನಿಖಾ ತಂಡ
ಇಸ್ಲಾಮಾಬಾದ್, ಗುರುವಾರ, 10 ಫೆಬ್ರವರಿ 2011( 15:33 IST )
ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರನ್ನು ತಾಲಿಬಾನ್ ಹತ್ಯೆಗೈಯುವ ಸಂಚಿನ ಬಗ್ಗೆ ಮಾಜಿ ಅಧ್ಯಕ್ಷ, ಮಿಲಿಟರಿ ಸರ್ವಾಧಿಕಾರಿಯಾಗಿದ್ದ ಪರ್ವೆಜ್ ಮುಷರ್ರಫ್ ಅವರಿಗೆ ತಿಳಿದಿತ್ತು. ಆದರೆ ಆ ಮುಖ್ಯವಾದ ಮಾಹಿತಿಯನ್ನು ಅವರು ಅಧಿಕಾರಿಗಳಿಗೆ ರವಾನಿಸಿರಲಿಲ್ಲವಾಗಿತ್ತು ಎಂದು ಭುಟ್ಟೋ ಹತ್ಯಾ ತನಿಖಾ ತಂಡ ಬಹಿರಂಗಪಡಿಸಿದೆ.
2007ರಲ್ಲಿ ನಡೆದ ಭುಟ್ಟೋ ಹತ್ಯಾ ಪ್ರಕರಣದ ಕುರಿತು ತನಿಖೆ ನಡೆಸಿರುವ ಜಂಟಿ ತನಿಖಾ ತಂಡ (ಜೆಐಟಿ) ಈ ಅಂಶವನ್ನು ಪತ್ತೆ ಹಚ್ಚಿದೆ. ಬೇನಜಿರ್ ಭುಟ್ಟೋ ಅವರನ್ನು ಹತ್ಯೆಗೈಯಲು ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್ ಮುಖ್ಯಸ್ಥ ಬೈತುಲ್ಲಾ ಮೆಹ್ಸೂದ್ ನಡೆಸಿರುವ ಸಂಚಿನ ಬಗ್ಗೆ ಮುಷರ್ರಫ್ ಅವರಿಗೆ ತಿಳಿದಿತ್ತು. ಆದರೆ ಮುಷ್ ಆ ಮಾಹಿತಿ ಭದ್ರತಾ ಅಧಿಕಾರಿಗಳಿಗೆ ತಲುಪದಂತೆ ತಡೆ ಹಿಡಿದಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿರುವುದಾಗಿ ದಿ ಡಾನ್ ದೈನಿಕ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ತನಿಖಾ ತಂಡದ ಖಾಲಿದ್ ಖುರೇಷಿ ಅವರು ಆಂತರಿಕ ಸಚಿವಾಲಯದ ಅಧಿಕಾರಿಗಳಿಗೆ ಪೂರ್ಣ ವಿವರ ನೀಡಿದ್ದು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಆರೋಪಪಟ್ಟಿಯನ್ನು ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ಕೋರ್ಟ್(ಎಟಿಸಿ)ಗೆ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಆರೋಪಪಟ್ಟಿಯಲ್ಲಿ ಮುಷರ್ರಫ್ ವಿರುದ್ಧ 12 ಆರೋಪಗಳು ದಾಖಲಾಗಿದೆ. ಬೇನಜಿರ್ ಅವರನ್ನು 2007 ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರ ಸಮಾರಂಭದಲ್ಲಿ ಭಾಗವಹಿಸಿ ಹೊರಡುತ್ತಿದ್ದ ಸಂದರ್ಭದಲ್ಲಿ ಗುಂಡು ಹೊಡೆದು ಹತ್ಯೆಗೈಯಲಾಗಿತ್ತು.