ವಿವಾದಿತ ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶದ ಉಸ್ತುವಾರಿಯನ್ನು ಉನ್ನತ ಮಟ್ಟದ ಸೇನಾ ಸಮಿತಿಗೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಬಾರಕ್ ಕುಟುಂಬ ವರ್ಗ ದೇಶದಿಂದ ರಹಸ್ಯ ಸ್ಥಳಕ್ಕೆ ಪಲಾಯನಗೈದಿರುವುದಾಗಿ ಅಲ್ ಅರೇಬಿಯಾ ಟೆಲಿವಿಷನ್ ವರದಿ ಮಾಡಿದೆ. ಆದರೆ ಯಾವ ಮೂಲ ತಿಳಿಸಿದೆ ಎಂಬುದನ್ನು ಖಚಿತಪಡಿಸಿಲ್ಲ.
ಮುಬಾರಕ್ ದೇಶ ತೊರೆದಿರುವ ಕುರಿತಂತೆ ನ್ಯೂಸ್ ಏಜೆನ್ಸಿ ಮಿಲಿಟರಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.
ಆದರೂ ಪ್ರಾಥಮಿಕ ಮಾಹಿತಿಗಳ ಪ್ರಕಾರ ಮುಬಾರಕ್ ಮತ್ತು ಕುಟುಂಬದ ಸದಸ್ಯರು ಈಜಿಪ್ಟ್ ತೊರೆದಿರುವುದಾಗಿ ಅಲ್ ಅರೇಬಿಯಾದ ವರದಿ ವಿವರಿಸಿದೆ. ಮುಬಾರಕ್ ಅವರು ಹೆಲಿಕಾಪ್ಟರ್ ಮೂಲಕ ಅಧ್ಯಕ್ಷರ ಅರಮನೆಯಿಂದ ಹೊರಟಿದ್ದು, ಅವರು ಬಹುತೇಕ ರೆಡ್ ಸೀ ರೆಸಾರ್ಟ್‌ನಲ್ಲಿ ಉಳಿದಿರುವ ಸಾಧ್ಯತೆ ಇದೆ ಎಂದು ಶಂಕಿಸಿದೆ.
ಈಜಿಪ್ಟ್ ಅನ್ನು ಕಳೆದ 30 ವರ್ಷಗಳಿಂದ ಆಳುತ್ತಿರುವ ಭ್ರಷ್ಟ ಹೊಸ್ನಿ ಮುಬಾರಕ್ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ ಸಾವಿರಾರು ಮಂದಿ ಕಳೆದ ಕೆಲವು ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಶುಕ್ರವಾರದಂದು ಪ್ರಜಾಪ್ರಭುತ್ವ ಪರವಾಗಿ ಬೃಹತ್ ಪ್ರಮಾಣದಲ್ಲಿ ಜನರು ಹೊಸ್ನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ತಾನು ಯಾವುದೇ ಕಾರಣಕ್ಕೂ ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯುವುದಿಲ್ಲ ಎಂದು ಹೊಸ್ನಿ ಪಟ್ಟು ಹಿಡಿದಿರುವ ಬೆನ್ನಲ್ಲೇ, ಅಧ್ಯಕ್ಷ ಹೊಸ್ನಿ ಅವರು ತನ್ನ ಕುಟುಂಬ ವರ್ಗದೊಂದಿಗೆ ರಹಸ್ಯ ಸ್ಥಳಕ್ಕೆ ಪಲಾಯನಗೈದಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.