ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕೊನೆಗೂ ಈಜಿಪ್ಟ್ ಜನಶಕ್ತಿಗೆ ಜಯ; ಮುಬಾರಕ್ ಯುಗಾಂತ್ಯ (Egypt celebrates | Hosni Mubarak | CAIRO | resigns)
PTI
ಸಾರ್ವಜನಿಕರ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರು ಶುಕ್ರವಾರ ರಾತ್ರಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸುವ ಮೂಲಕ ಸುಮಾರು 30 ವರ್ಷಗಳ ಸರ್ವಾಧಿಕಾರ ಅಂತ್ಯಗೊಂಡಂತಾಗಿದೆ.

ಭ್ರಷ್ಟ ಅಧ್ಯಕ್ಷ ಮುಬಾರಕ್ ಅವರ ಪದತ್ಯಾಗಕ್ಕೆ ಪ್ರತಿಭಟನಾಕಾರರು ಶುಕ್ರವಾರ ಅಂತಿಮ ಗಡುವು ವಿಧಿಸಿದ್ದರು. ಪ್ರತಿಭಟನಾಕಾರರು ಕಳೆದ 18 ದಿನಗಳಿಂದ ತೀವ್ರ ಪ್ರತಿಭಟನೆ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಹೊಸ್ನಿ ಪದತ್ಯಾಗದ ಸುದ್ದಿ ಹೊರಬೀಳುತ್ತಿದ್ದಂತೆಯೇ ಅಧ್ಯಕ್ಷರ ಅರಮನೆ ಮುಂಭಾಗದಲ್ಲಿ ನೆರೆದಿದ್ದ ಸಾವಿರಾರು ಜನರು ಒಬ್ಬರಿಗೊಬ್ಬರು ಮುತ್ತನ್ನು ಕೊಟ್ಟು ಸಂಭ್ರಮವನ್ನಾಚರಿಸಿದರು.

ಅಧ್ಯಕ್ಷ ಹೊಸ್ನಿ ಮುಬಾರಕ್ ಅವರು ಶುಕ್ರವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅಧಿಕಾರವನ್ನು ಮಿಲಿಟರಿಗೆ ಹಸ್ತಾಂತರಿಸಿದ್ದಾರೆ. ಕೊನೆಗೂ ತಮ್ಮ ಪ್ರತಿಭಟನೆಗೆ ಜಯ ದೊರಕಿದೆ ಎಂದು ಪ್ರತಿಭಟನಾಕಾರರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇದು ನನ್ನ ಜನರೇಷನ್‌ಗೆ ದೊರೆತ ಬಹು ಸಂತಸದ ದಿನವಾಗಿದೆ ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಅಲಿ ಅಲ್ ಟಾಯಾಬ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಜಿಪ್ಟಿಯನ್‌ರಿಗೆ ಸಂತಸವಾಗಿದೆ, ಇದು ನಮಗೆ ದೊರೆತ ಜಯ ಎಂಬುದಾಗಿ ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷರ ಅರಮನೆ ಮುಂದೆ ಏರು ಧ್ವನಿಯಲ್ಲಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿರುವುದು ಮಾಧ್ಯಮಗಳಲ್ಲಿ ಬಿತ್ತರವಾಗಿದೆ.

ಮುಬಾರಕ್ ಯುಗ ಅಂತ್ಯ:
ಅನ್ವರ್ ಅಲ್ ಸಾದತ್ ಹತ್ಯೆಯ ನಂತರ 1981ರ ಅಕ್ಟೋಬರ್ 14ರಂದು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಮುಬಾರಕ್ ಅವರು ಮುಂದೆ ನಿರಂಕುಶ ಅಧಿಕಾರ ನಡೆಸಿದ್ದರು. ಈ ಮೊದಲು ಎದ್ದಿದ್ದ ಅಸಮಾಧಾನಗಳನ್ನೆಲ್ಲ ಜಾಣತನದಿಂದ ನಿಭಾಯಿಸಿದ್ದ ಅವರಿಗೆ ಕಳೆದ 25ರಿಂದ ಆರಂಭವಾದ ಲಕ್ಷಾಂತರ ಜನರ ಪ್ರತಿಭಟನೆಯನ್ನು ದಮನಿಸಲು ಸಾಧ್ಯವಾಗಿಲ್ಲವಾಗಿತ್ತು.

ಸುಮಾರು 4 ಸಾವಿರ ವರ್ಷಗಳಷ್ಟು ಇತಿಹಾಸ ಇರುವ ದೇಶದಲ್ಲಿ ಪಿರಮಿಡ್‌ಗಳೇ ಸಾಕ್ಷಿಗಳು. ಮೂರು ದಶಕಗಳ ಕಾಲ ಅಧಿಕಾರ ನಡೆಸಿದ ಅಧ್ಯಕ್ಷರು ಪದತ್ಯಾಗ ಮಾಡಲೇಬೇಕು ಎಂಬ ಜನರ ಪ್ರತಿಭಟನೆಯ ಮುಂದೆ ಶಕ್ತಿಶಾಲಿ ಸೇನೆ ಕೂಡ ತಟಸ್ಥವಾಗಬೇಕಾಯಿತು. ಆದರೂ ಹಿಂಸಾಚಾರದಲ್ಲಿ 150ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ಅಂತೂ ಕೊನೆಗೂ ಮುಬಾರಕ್ (82) ಅವರು ಜನರ ಪ್ರತಿಭಟನೆಗೆ ಮಣಿಯುವ ಮೂಲಕ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದಿದ್ದು, ತಮ್ಮ ಕುಟುಂಬದ ಸಹಿತ ಈಜಿಪ್ಟ್ ತೊರೆದಿದ್ದಾರೆ ಎಂದು ವರದಿಯಾಗಿದೆ.

ಅದೇ ರೀತಿ ಟ್ಯುನೇಷಿಯಾದಲ್ಲೂ 23 ವರ್ಷಗಳ ಕಾಲ ಅಧಿಕಾರ ನಡೆಸಿದ್ದ ಅಧ್ಯಕ್ಷ ಜಿನೆ ಎಲ್ ಅಬಿಸೈನ್ ಬೆನ್ ಅಲಿ ಕಳೆದ ಜನವರಿ 14ರಂದು ಜನರ ಪ್ರತಿಭಟನೆಗೆ ತಲೆಬಾಗಿ ಅಧಿಕಾರ ತ್ಯಜಿಸಿ ವಿದೇಶಕ್ಕೆ ಪರಾರಿಯಾಗಿದ್ದರು.
ಇವನ್ನೂ ಓದಿ