ಹೊಸ್ನಿ ಪರಾರಿಯಾಗಿಲ್ಲ, ಈಜಿಪ್ಟ್‌ನಲ್ಲೇ ಇದ್ದಾರೆ: ಪ್ರಧಾನಿ
ಕೈರೋ, ಸೋಮವಾರ, 14 ಫೆಬ್ರವರಿ 2011( 13:41 IST )
ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಕೊನೆಗೂ ಈಜಿಪ್ಟ್ ಅಧ್ಯಕ್ಷ ಸ್ಥಾನದಿಂದ ಶುಕ್ರವಾರ ಕೆಳಗಿಳಿದಿರುವ ಹೊಸ್ನಿ ಮುಬಾರಕ್, ದೇಶದ ರೆಡ್ ಸೀ ರೆಸಾರ್ಟ್‌ನ ಶರ್ಮ್ ಎಲ್ ಶೇಕ್‌ನಲ್ಲಿ ಠಿಕಾಣಿ ಹೂಡಿರುವುದಾಗಿ ಪ್ರಧಾನಿ ಅಹ್ಮದ್ ಶಾಫಿಕ್ ತಿಳಿಸಿದ್ದಾರೆ.
ಹೊಸ್ನಿ ಮುಬಾರಕ್ ಅಧ್ಯಕ್ಷಗಾದಿಗೆ ರಾಜೀನಾಮೆ ಕೊಟ್ಟ ನಂತರ ತಮ್ಮ ಕುಟುಂಬ ಸಮೇತ ವಿದೇಶಕ್ಕೆ ಪರಾರಿಯಾಗಿದ್ದಾರೆಂಬ ಮಾಧ್ಯಮದ ವರದಿಯನ್ನು ತಳ್ಳಿಹಾಕಿದ ಅವರು, ಮುಬಾರಕ್ ಈಗಲೂ ಶರ್ಮ್ ಎಲ್ ಶೇಕ್‌ನಲ್ಲಿಯೇ ಇದ್ದಾರೆ ಎಂದು ಭಾನುವಾರ ಪ್ರಧಾನಿ ಅಹ್ಮದ್ ಖಚಿತಪಡಿಸಿರುವುದಾಗಿ ಅಧಿಕೃತ ಮೆನಾ ನ್ಯೂಸ್ ಏಜೆನ್ಸಿ ತಿಳಿಸಿರುವುದಾಗಿ ಕ್ಸಿನ್‌ಹುವಾ ವರದಿ ಮಾಡಿದೆ.
ಸುಮಾರು 18 ದಿನಗಳ ಕಾಲ ಈಜಿಪ್ಟ್ ಜನರು ಅಧ್ಯಕ್ಷ ಹೊಸ್ನಿ ಮುಬಾರಕ್ ಕೆಳಗಿಳಿಯಬೇಕು ಎಂದು ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆಸಿದ್ದರು. ಕೊನೆಗೂ ಮಣಿದ ಹೊಸ್ನಿ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡುವ ಮೂಲಕ 30 ವರ್ಷಗಳ ಸರ್ವಾಧಿಕಾರ ಅಂತ್ಯಗೊಂಡಂತಾಗಿತ್ತು.
ಪ್ರಸಕ್ತವಾಗಿ ಈಜಿಪ್ಟ್ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಪ್ರಧಾನಿ ತಿಳಿಸಿದ್ದು, ಆ ನಿಟ್ಟಿನಲ್ಲಿ ನಾವು ಮುಂದಿನ ದಿನಗಳಲ್ಲಿ ದೇಶದಲ್ಲಿ ಸುಭದ್ರ ಆಡಳಿತ ನೀಡುವುದಾಗಿ ಭರವಸೆ ನೀಡಿದರು.