ಅಪ್ರಾಪ್ತ ಬಾಲಕಿ ಜತೆ ಲೈಂಗಿಕ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಇಟಲಿಯ ವಿವಾದಿತ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ವಿರುದ್ಧ ಸಾವಿರಾರು ಮಹಿಳೆಯರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.
ದೇಶದ 60 ನಗರಗಳಲ್ಲಿ ಸಾವಿರಾರು ಮಹಿಳೆಯರು 'ಇಟಲಿ ವೇಶ್ಯಾಗೃಹವಲ್ಲ' ಎಂಬ ಬ್ಯಾನರ್ ಹಿಡಿದು ಮೆರವಣಿಗೆ ನಡೆಸಿ, ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು.
17ರ ಹರೆಯದ ಮೊರೋಕ್ಕೋ ನೈಟ್ ಕ್ಲಬ್ ಡ್ಯಾನ್ಸರ್ ಜತೆ ಪ್ರಧಾನಿ ಬೆರ್ಲುಸ್ಕೋನಿ ಲೈಂಗಿಕ ಚಟುವಟಿಕೆ ನಡೆಸಿರುವ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಅಷ್ಟೇ ಅಲ್ಲ ಬಾಲಕಿಗೆ ಪ್ರಧಾನಿಯವರು ಭಾರೀ ಮೊತ್ತದ ಹಣ ಮತ್ತು ಚಿನ್ನಾಭರಣ ಕೊಟ್ಟಿರುವುದಾಗಿ ಆರೋಪಿಸಲಾಗಿದೆ. ಆದರೆ ಸೆಕ್ಸ್ ಸ್ಕ್ಯಾಂಡಲ್ ಕುರಿತಂತೆ ಬಾಲಕಿ ಮತ್ತು ಪ್ರಧಾನಿ ಇಬ್ಬರೂ ಈ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ 74ರ ಹರೆಯದ ಪ್ರಧಾನಿ ಬೆರ್ಲುಸ್ಕೋನಿ ಹಲವು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಮೊರೊಕ್ಕೋ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಟರ್ಸ್ ದಾಖಲೆ ಕಲೆ ಹಾಕಲು ಮುಂದಾಗಿದ್ದಾರೆ. ಒಂದು ವೇಳೆ ಪ್ರಕರಣದಲ್ಲಿ ಬೆರ್ಲುಸ್ಕೋನಿ ದೋಷಿ ಎಂದು ಸಾಬೀತಾದರೆ ಸುಮಾರು 15 ವರ್ಷಗಳ ಜೈಲುಶಿಕ್ಷೆ ಅನುಭವಿಸಬೇಕಾಗಲಿದೆ ಎಂದು ವರದಿಯೊಂದು ತಿಳಿಸಿದೆ.
ಏತನ್ಮಧ್ಯೆ, ಸೆಕ್ಸ್ ಸ್ಕ್ಯಾಂಡಲ್ ವಿಚಾರದಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಪ್ರಧಾನಿ ಹಾಗೂ ಬೆಂಬಲಿಗರು ಪ್ರತಿಕ್ರಿಯೆ ನೀಡಿದ್ದಾರೆ.