ಇಸ್ಲಾಮಾಬಾದ್, ಸೋಮವಾರ, 14 ಫೆಬ್ರವರಿ 2011( 20:18 IST )
ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ತಾಸೀರ್ ಅವರನ್ನು ಗುಂಡಿಕ್ಕಿ ಹತ್ಯೆಗೈದ ಬಗ್ಗೆ ತನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಹಂತಕ, ಪಾಕಿಸ್ತಾನಿ ಪೊಲೀಸ್ ಗಾರ್ಡ್ ಸೋಮವಾರ ಭಯೋತ್ಪಾದನಾ ನಿಗ್ರಹ ಕೋರ್ಟ್ ವಿಚಾರಣೆ ವೇಳೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಆತ ಆರೋಪಿ ಎಂದು ಹೇಳಿದೆ.
ಕಳೆದ ಜನವರಿ 4ರಂದು ಇಸ್ಲಾಮಾಬಾದ್ ರೆಸ್ಟೋರೆಂಟ್ ಹೊರಭಾಗದಲ್ಲಿ ಮುಮ್ತಾಚ್ ಖಾದ್ರಿ(26) ರಾಜ್ಯಪಾಲ ಸಲ್ಮಾನ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ. ಅಲ್ಲದೇ ಈಗಾಗಲೇ ಆತ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದ. ಇಂದು ರಾವಲ್ಪಿಂಡಿಯ ಗ್ಯಾರಿಸನ್ ನಗರದ ಅಡಿಯಾಲಾ ಕೋರ್ಟ್‌ನಲ್ಲಿ ಇನ್ ಕ್ಯಾಮರಾ ವಿಚಾರಣೆಯ ನಂತರ ಖಾದ್ರಿ ದೋಷಾರೋಪಣೆ ಮಾಡಲಾಯಿತು ಎಂದು ಆತನ ವಕೀಲರು ತಿಳಿಸಿದ್ದಾರೆ.
ಖಾದ್ರಿ ಭಯೋತ್ಪಾದನೆಗೆ ಬದ್ಧನಾಗಿದ್ದ, ಅಷ್ಟೇ ಅಲ್ಲ ಆತ ತಾಸೀರ್ ಅವರನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆಗೈದಿರುವುದಾಗಿ ನ್ಯಾಯಾಧೀಶರು ಈ ಸಂದರ್ಭದಲ್ಲಿ ಹೇಳಿದರು.
ರಾಜ್ಯಪಾಲ ತಾಸೀರ್ ಅವರು ಕುರಾನ್ ಮತ್ತು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಹಾಗಾಗಿ ಅವರ ಹತ್ಯೆ ಕಾನೂನು ಬಾಹಿರವಲ್ಲ ಎಂದು ಖಾದ್ರಿ ಈ ಸಂದರ್ಭದಲ್ಲಿ ತನ್ನ ಅಭಿಪ್ರಾಯ ಮಂಡಿಸಿರುವುದಾಗಿ ವರದಿ ತಿಳಿಸಿದೆ. ಹಾಗಾಗಿ ತಾನು ಅಪರಾಧಿ ಅಲ್ಲ ಎಂದು ಮನವಿ ಮಾಡಿಕೊಂಡಿರುವುದಾಗಿ ಹೇಳಿದೆ.