ಪಾಕ್: ವಂಚಕ ಪ್ರಿಯಕರನ ಹತ್ಯೆ ದೃಶ್ಯ ಸೆರೆಹಿಡಿದ ಪ್ರಿಯತಮೆ!
ಇಸ್ಲಾಮಾಬಾದ್, ಗುರುವಾರ, 17 ಫೆಬ್ರವರಿ 2011( 15:10 IST )
ಪ್ರಿಯಕರ ತನಗೆ ಮೋಸ ಮಾಡಿರುವುದಕ್ಕೆ ಆಕ್ರೋಶಗೊಂಡ ಪಾಕಿಸ್ತಾನದ 17ರ ಹರೆಯದ ಪ್ರಿಯತಮೆಯೊಬ್ಬಳನ್ನು, ಬಾಡಿಗೆ ಗೂಂಡಾಗಳನ್ನು ಛೂ ಬಿಟ್ಟು ಆತನನ್ನು ಹತ್ಯೆ ಮಾಡಿಸಿದ್ದಳು. ಅಷ್ಟೇ ಅಲ್ಲ ಆತನ ದೇಹವನ್ನು ತುಂಡು, ತುಂಡು ಮಾಡುತ್ತಿರುವ ಬೀಭತ್ಸ ದೃಶ್ಯವನ್ನು ಸ್ವತಃ ತನ್ನ ಸೆಲ್ ಫೋನ್ ಕ್ಯಾಮರಾದಲ್ಲಿ ಸೆರೆಹಿಡಿದಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಮ್ರಾನ್ (20) ಎಂಬಾತ ಮೈರಾ ಮಾರ್ಯಾಮ್ (17) ಎಂಬಾಕೆಯನ್ನು ಪ್ರೀತಿಸಿ ವಂಚಿಸಿದ್ದ. ಇದರಿಂದ ಸಿಟ್ಟುಗೊಂಡ ಪ್ರಿಯತಮೆ ಮೈರಾ ಆತನನ್ನು ಕೊಲ್ಲಿಸಿ ಆತನ ದೇಹವನ್ನು ಕತ್ತರಿಸುತ್ತಿರುವ ದೃಶ್ಯವನ್ನು ಸೆಲ್‌ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿರುವುದಾಗಿ ದಿ ಎಕ್ಸ್‌ಪ್ರೆಸ್ ಟ್ರೈಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಆ ಹತ್ಯೆಯ ದೃಶ್ಯ ಶಂಕಿತ ಆರೋಪಿ ಉಮೈರ್ ಅಲಿ ಖಾನ್ ಎಂಬಾತನ ಲ್ಯಾಪ್‌ಟಾಪ್‌ನಲ್ಲಿಯೂ ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಮ್ರಾನ್ ಬೀಸಿದ ಪ್ರೇಮಪಾಶಕ್ಕೆ ತಾನು ಸಿಲುಕಿರುವುದಾಗಿ ದೂರಿರುವ ಮೈರಾ, ತನ್ನನ್ನು ಆತ ಲೈಂಗಿಕವಾಗಿ ಬಳಸಿಕೊಂಡು ನಂತರ ಮೂಲೆಗುಂಪು ಮಾಡಿದ್ದ. ಬಳಿಕ ವಂಚಕ ಕಮ್ರಾನ್ ತನ್ನ ಗೆಳೆಯರ ಜೊತೆಯೂ ಲೈಂಗಿಕ ಸಂಪರ್ಕ ನಡೆಸುವಂತೆ ಒತ್ತಾಯಿಸಿದ್ದ. ಅವನ ಈ ಬೇಡಿಕೆಯನ್ನು ನನ್ನಿಂದ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ನಾನು ಆತನನ್ನು ಕೊಲ್ಲಲು ನಿರ್ಧರಿಸಿರುವುದಾಗಿ ತಿಳಿಸಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಈ ಎಲ್ಲಾ ಜಟಾಪಟಿಯ ನಂತರ ಮೈರಾ ಕಮ್ರಾನ್ ಸಹೋದರ ಉಮೈರ್‌ನ ಸ್ನೇಹ ಸಂಪಾದಿಸಲು ಯಶಸ್ವಿಯಾಗಿದ್ದಳು. ತದನಂತರ ಉಮೈರ್ ಹತ್ಯೆಗೆ ಸಂಚು ರೂಪಿಸಿದ್ದರು. ಕಳೆದ ವರ್ಷ ಡಿಸೆಂಬರ್ 20ರಂದು ಉಮೈರ್ , ಮುಹಮ್ಮದ್ ಲತೀಫ್, ಹಸ್‌ನಾತ್ ಸೇರಿಕೊಂಡು ಕಮ್ರಾನ್‌ನನ್ನು ಶಾಕಾರ್‌ಪಾರಿಯಾನ್ ಪ್ರದೇಶಕ್ಕೆ ಕರೆಯಿಸಿಕೊಂಡು ಹತ್ಯೆಗೈದಿದ್ದರು. ಆ ಸಂದರ್ಭದಲ್ಲಿ ಆತನ ದೇಹವನ್ನು ಕತ್ತರಿಸುತ್ತಿದ್ದ ದೃಶ್ಯವನ್ನು ಮೈರಾ ತನ್ನ ಸೆಲ್‌ಫೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಳು.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು 2011ರ ಫೆಬ್ರುವರಿ 10ರಂದು ಆರೋಪಿಗಳನ್ನು ಸೆರೆ ಹಿಡಿದಿದ್ದು, ತನಿಖೆ ನಡೆಸುತ್ತಿರುವುದಾಗಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.