ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಈಜಿಪ್ಟ್ ನೆಲದಲ್ಲಿಯೇ ಸಾಯ್ಬೇಕು,ವಿದೇಶಕ್ಕೆ ಹೋಗಲ್ಲ: ಹೊಸ್ನಿ (Hosni Mubarak | Egypt | die in Egypt | Saudi official | Al Arabiya)
ಸಾರ್ವಜನಿಕರ 18 ದಿನಗಳ ಪ್ರತಿಭಟನೆ ಮಣಿದು ಕೊನೆಗೂ ಈಜಿಪ್ಟ್ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದಿರುವ ಸರ್ವಾಧಿಕಾರಿ ಹೊಸ್ನಿ ಮುಬಾರಕ್, ತಾನು ಈಜಿಪ್ಟ್ ನೆಲದಲ್ಲಿಯೇ ಸಾವನ್ನಪ್ಪಬೇಕು ಎಂಬ ಬಯಕೆ ವ್ಯಕ್ತಪಡಿಸಿರುವುದಾಗಿ ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಉಸಿರು ತಾಯ್ನಾಡಿನಲ್ಲೇ ಅಂತ್ಯವಾಗಬೇಕು, ಅಲ್ಲದೇ ಬೇರೆ ದೇಶಗಳ ಆಹ್ವಾನವನ್ನೂ ಹೊಸ್ನಿ ತಿರಸ್ಕರಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸುಮಾರು 30 ವರ್ಷಗಳ ಕಾಲ ಈಜಿಪ್ಟ್ ಅನ್ನು ಆಳಿದ್ದ ಮುಬಾರಕ್ ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ತಾಯ್ನಾಡನ್ನು ಬಿಟ್ಟು ಹೊರಹೋಗಲಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ಅಮೆರಿಕನ್ ನೆಟ್‌ವರ್ಕ್ ಸಿಬಿಎಸ್ ವಿವರಿಸಿದೆ.
82ರ ಹರೆಯದ ಮುಬಾರಕ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಏತನ್ಮಧ್ಯೆ ಸೌದಿ ಅರೇಬಿಯಾಕ್ಕೆ ಬನ್ನಿ ಎಂಬ ರಾಜನ ಬೇಡಿಕೆಯನ್ನು ಅವರು ಸಾರಸಗಟಾಗಿ ತಿರಸ್ಕರಿಸಿರುವುದಾಗಿ ಸೌದಿ ಅಧಿಕಾರಿಗಳು ತಿಳಿಸಿದ್ದಾರೆಂದು ಅಲ್ ಅರಾಬಿಯಾ ಹೇಳಿದೆ.
ಈಜಿಪ್ಟ್ ಅಧ್ಯಕ್ಷಗಾದಿಯಿಂದ ಕೆಳಗಿಳಿದ ನಂತರ ಹೊಸ್ನಿ ಮುಬಾರಕ್ ಅವರು ತಮ್ಮ ಕುಟುಂಬ ವರ್ಗದ ಸಮೇತ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಮುಬಾರಕ್ ಅವರು ಈಜಿಪ್ಟ್ ಬಿಟ್ಟು ಹೋಗಿಲ್ಲ, ದೇಶದಲ್ಲಿಯೇ ಇದ್ದಾರೆ ಎಂದು ಪ್ರಧಾನಿ ಸ್ಪಷ್ಟನೆ ನೀಡಿದ್ದರು.