ಸುಮಾರು 40 ವರ್ಷಕ್ಕಿಂತಲೂ ಅಧಿಕ ಕಾಲ ಅಧ್ಯಕ್ಷ ಗದ್ದುಗೆಯಲ್ಲಿರುವ ಮೊಮ್ಮರ್ ಗಡಾಫಿ ವಿರುದ್ಧ ಲಿಬ್ಯಾದಲ್ಲಿ ಪ್ರತಿಭಟನೆ ತೀವ್ರಗೊಳ್ಳತೊಡಗಿದ್ದು, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಗಡಾಫಿ ಪರ ಬೆಂಬಲಿಗರ ನಡುವೆ ನಡೆದ ಘರ್ಷಣೆಯಲ್ಲಿ ಸುಮಾರು 45 ಜನರು ಸಾವನ್ನಪ್ಪಿದ್ದಾರೆ.
ಸರ್ವಾಧಿಕಾರಿ ಗಡಾಫಿ ವಿರುದ್ಧ ಪ್ರತಿಭಟನೆ ನಡೆಸುವಂತೆ ಪ್ರತಿಭಟನಾಕಾರರು ಆನ್‌ಲೈನ್‌ನಲ್ಲಿ ಕರೆ ನೀಡಿದ್ದಾರೆ. ಏತನ್ಮಧ್ಯೆ ಪ್ರತಿಭಟನಾಕಾರರು, ಗಡಾಫಿ ಬೆಂಬಲಿಗರು ಹಾಗೂ ಭದ್ರತಾ ಪಡೆಗಳ ನಡುವಿನ ಘರ್ಷಣೆಯಲ್ಲಿ 40ಕ್ಕೂ ಅಧಿಕ ಮಂದಿ ಬಲಿಯಾಗಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ಕೆಲವು ಬೀದಿಗಳಲ್ಲಿ ವಾಹನ ಸಂಚಾರಕ್ಕೆ ತಡೆಯೊಡ್ಡಿರುವ ದೃಶ್ಯವನ್ನು ಟಿವಿ ಚಾನೆಲ್‌ಗಳಲ್ಲಿ ಪ್ರಸಾರ ಮಾಡುತ್ತಿರುವುದಾಗಿ ವರದಿ ಹೇಳಿದೆ.
ಇತ್ತೀಚೆಗಷ್ಟೇ ಈಜಿಪ್ಟ್‌ನಲ್ಲಿ ಸರ್ವಾಧಿಕಾರಿ ಹೊಸ್ನಿ ಮುಬಾರಕ್ ವಿರುದ್ಧ ಜನರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದರು. ಕೊನೆಗೂ ಪ್ರತಿಭಟನೆಗೆ ಮಣಿದ ಹೊಸ್ನಿ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಟ್ಟಿದ್ದರು. ಅದಕ್ಕೂ ಮುನ್ನ ಟ್ಯುನಿಷಿಯಾದಲ್ಲಿ 24 ವರ್ಷಗಳ ಕಾಲ ಆಳಿದ ಬೆನ್ ಅಲಿ ವಿರುದ್ಧವೂ ಜನ ಪ್ರತಿಭಟನೆ ನಡೆಸಿದ್ದರು. ನಂತರ ಅಲಿ ಕೂಡ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಇದೀಗ ಪ್ರತಿಭಟನೆಯ ಕಾವು ಯೆಮೆನ್, ಲಿಬ್ಯಾಕ್ಕೂ ಹಬ್ಬಿದೆ.