ಮೆಕ್ಸಿಕೊ ಸಿಟಿ, ಭಾನುವಾರ, 20 ಫೆಬ್ರವರಿ 2011( 09:44 IST )
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವುದು ಸಾಮಾನ್ಯ. ಆದರೆ ಬ್ರಿಟನ್ನಿನ ರಾಜಕುಮಾರ ಪ್ರಿನ್ಸ್ ವಿಲಿಯಮ್ ಮತ್ತು ಕೇಟ್ ಮಿಡ್ಲೆಟನ್ ಅವರ ವಿವಾಹ ಮಹೋತ್ಸವಕ್ಕೆ ತನಗೆ ಆಮಂತ್ರಣ ನೀಡಲೇಬೇಕೆಂದು ಹಠ ಹಿಡಿದಿರುವ 19ರ ಹರೆಯದ ಮೆಕ್ಸಿಕೊದ ಯುವತಿ ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾಳೆ!
ಮೆಕ್ಸಿಕೊ ನಗರದ ಬ್ರಿಟನ್ ರಾಯಭಾರಿ ಕಚೇರಿ ಮುಂಭಾಗ ಡೇರೆ ಹಾಕಿಕೊಂಡು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಎಸ್ಟಿಬಲಿಸ್ ಚಾವೆಜ್ 'ನಾನು ಪುಟ್ಟ ಹುಡುಗಿಯಾಗಿರುವಾಗದಿಂದಲೇ ಲೇಡಿ ಡಿ ಅವರ ಅಭಿಮಾನಿಯಾಗಿದ್ದೆ' ಹಾಗೂ ನನ್ನ ತಾಯಿ ಕೂಡ ಅವರ ಅಭಿಮಾನಿಯಾಗಿದ್ದರು...ನಾನು ಮುಂದಿನ ರಾಜಕುವರನ ಮದುವೆಗೆ ಹೋಗಲೇಬೇಕೆಂದು ಸ್ವಯಂ ಪ್ರತಿಜ್ಞೆ ಮಾಡಿದ್ದೆ ಎಂದು ಯುವತಿ ಅವಲವತ್ತುಕೊಂಡಿದ್ದಾಳೆ.
ಲಂಡನ್ನಿನ ವೆಸ್ಟ್ ಮಿನ್‌ಸ್ಟರ್ ಚರ್ಚ್‌ನಲ್ಲಿ ಏಪ್ರಿಲ್ 29ರಂದು ನಡೆಯಲಿರುವ ರಾಜಕುವರನ ವಿವಾಹದ ಆಮಂತ್ರಣಕ್ಕಾಗಿ ಬೇಡಿಕೆಯೊಡ್ಡಿರುವ ಈ ಯುವತಿಯ ಕೋರಿಕೆಯನ್ನು ಮೆಕ್ಸಿಕೊದಲ್ಲಿರುವ ಬ್ರಿಟನ್ ರಾಯಭಾರಿ ಸುತರಾಂ ನಿರಾಕರಿಸಿದ್ದಾರೆ.
ಕೊನೆಯ ಕ್ಷಣದವರೆಗೂ ಹೋರಾಟ ಮಾಡುವುದಾಗಿ ದೃಢ ಸಂಕಲ್ಪ ಮಾಡಿರುವುದಾಗಿ ತಿಳಿಸಿರುವ ಈ ಯುವತಿ ಹಿಂತಿರುಗುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾಳೆ.