ನಾಲ್ಕು ವರ್ಷದಿಂದ ವ್ಯಕ್ತಿಯೊಬ್ಬನ ತಲೆಯಲ್ಲೇ ಇದ್ದ ನಾಲ್ಕು ಇಂಚಿನ ತುಕ್ಕುಹಿಡಿದ ಚಾಕುವನ್ನು ದಕ್ಷಿಣ ಚೀನಾದ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸಕೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ತೀವ್ರ ತಲೆನೋವು ಮತ್ತು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮೂವತ್ತು ವರ್ಷದ ಲಿ ಫ್ಯೂಯನ್, ತನ್ನ ತಲೆನೋವಿಗೆ ಕಾರಣವೇನೆಂದು ಆತನಿಗೆ ತಿಳಿದಿರಲಿಲ್ಲ ಎಂದು ಯುನ್ನಾನ್ ಪ್ರಾಂತ್ಯದ ಯುಕ್ಷಿ ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ತಲೆನೋವು ಎದುರಿಸುತ್ತಿದ್ದ ಲಿ ಫ್ಯೂಯನ್‌ನ ಬಲಬದಿಯ ದವಡೆಯ ಭಾಗಕ್ಕೆ ನಾಲ್ಕು ವರ್ಷದ ಹಿಂದೆ ಕಳ್ಳರು ಚೂರಿಯಿಂದ ಇರಿದಿದ್ದರು. ಆ ಸಂದರ್ಭದಲ್ಲಿ ಮುರಿತಕ್ಕೊಳಗಾಗಿ ಚೂರಿಯ ಒಂದು ಭಾಗ ಯಾರ ಗಮನಕ್ಕೂ ಬಾರದೆ ದವಡೆಯ ಮೇಲ್ಬಾಗದ ಬುರುಡೆಯಲ್ಲೇ ಉಳಿದುಕೊಂಡಿತ್ತು ಎಂದು ಹೆಸರು ಹೇಳಲಿಚ್ಚಿಸದ ಆಸ್ಪತ್ರೆಯ ಕಮ್ಯುನಿಸ್ಟ್ ಪಾರ್ಟಿಯ ನಿರ್ದೇಶಕರೊಬ್ಬರು ವಿವರಿಸಿದ್ದಾರೆ.
ತುಕ್ಕು ಹಿಡಿದು ಚೂರಾಗುವ ಸ್ಥಿತಿಯಲ್ಲಿದ್ದ ನಾಲ್ಕು ಇಂಚಿನ ಚಾಕುವಿನ ತುಂಡನ್ನು ತುಂಬಾ ಸೂಕ್ಷ್ಮವಾಗಿ, ಯಶಸ್ವಿಯಾಗಿ ಹೊರತೆಗೆದಿರುವ ಸರ್ಜನ್ ಅವರ ಸೇವೆಯನ್ನು ಮಾಧ್ಯಮಗಳು ಪವಾಢ ಸದೃಶ ಎಂದು ವರದಿ ಮಾಡಿವೆ.