ಸಾರ್ವಜನಿಕರ ತೀವ್ರ ಪ್ರತಿಭಟನೆಗೆ ಮಣಿದು ಕೊನೆಗೂ ಈಜಿಪ್ಟ್ ಅಧ್ಯಕ್ಷಗಾದಿಗೆ ರಾಜೀನಾಮೆ ನೀಡಿರುವ ಹೊಸ್ನಿ ಮುಬಾರಕ್ ಅವರ ಯಾವುದೇ ಆಸ್ತಿ-ಪಾಸ್ತಿ ವಿದೇಶದಲ್ಲಿ ಇಲ್ಲ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ. 1981ರಿಂದ ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗಿನ ತಮ್ಮ ಆಸ್ತಿಯ ಕುರಿತ ಸಂಪೂರ್ಣ ಮಾಹಿತಿಯನ್ನು ಹೊಸ್ನಿ ಅಧಿಕಾರಿಗಳಿಗೆ ನೀಡಿರುವುದಾಗಿ ವರದಿ ಹೇಳಿದೆ.
ಹೊಸ್ನಿ ಮುಬಾರಕ್ ಅವರು ದೇಶವನ್ನು ಸುಮಾರು 30 ವರ್ಷಗಳ ಕಾಲ ಆಳಿದ್ದು, ಅವರು ಭ್ರಷ್ಟಾಚಾರದಿಂದ ಕೋಟ್ಯಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. ಒಟ್ಟಾರೆ 70 ಬಿಲಿಯನ್‌ಗೂ ಅಧಿಕ ಆಸ್ತಿ ಹಾಗೂ ನಗದನ್ನು ವಿದೇಶದಲ್ಲಿ ಹೂಡಿರುವುದಾಗಿ ವಿದೇಶಿ ಮತ್ತು ಸ್ಥಳೀಯ ಮಾಧ್ಯಮಗಳ ವರದಿಯನ್ನು ಹೊಸ್ನಿ ವಕೀಲರು ಸಾರಸಗಟಾಗಿ ತಳ್ಳಿಹಾಕಿದ್ದಾರೆ.
ಆದರೆ ಹೊಸ್ನಿ ಕಾನೂನು ಸಲಹೆಗಾರರ ಹೆಸರನ್ನಾಗಲಿ, ಮುಬಾರಕ್ ಘೋಷಿಸಿರುವ ಆಸ್ತಿಯ ವಿವರ ಮಾತ್ರ ಲಭ್ಯವಾಗಿಲ್ಲ. ಆದರೆ ಮುಬರಾಕ್ ಅವರು ವಿದೇಶದಲ್ಲಿ ಯಾವುದೇ ಆಸ್ತಿಯನ್ನು ಮಾಡಿಲ್ಲ. ಅಲ್ಲದೇ ವಿದೇಶ ಬ್ಯಾಂಕ್‌ಗಳಲ್ಲಿ ಹಣವನ್ನೂ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಜಿಪ್ಟ್ ಅನ್ನು 30 ವರ್ಷಗಳ ಕಾಲ ಆಳಿದ್ದ ಸರ್ವಾಧಿಕಾರಿ ಹೊಸ್ನಿ ಮುಬಾರಕ್ ವಿರುದ್ಧ ದೇಶದ ಜನರು 18 ದಿನಗಳ ಕಾಲ ತೀವ್ರ ಪ್ರತಿಭಟನೆ ನಡೆಸಿದ್ದರು. ಅಂತೂ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಹೊಸ್ನಿ ಅಧ್ಯಕ್ಷಗಾದಿಗೆ ರಾಜೀನಾಮೆ ಕೊಟ್ಟಿದ್ದರು.
ಅಧ್ಯಕ್ಷಗಾದಿಯಿಂದ ಮುಬಾರಕ್ ಕೆಳಗಿಳಿದ ನಂತರ ಅವರು ತಮ್ಮ ಕುಟುಂಬ ಸಹಿತ ವಿದೇಶಕ್ಕೆ ಪರಾರಿಯಾಗಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಹೊಸ್ನಿ ಅವರು ಈಜಿಪ್ಟ್‌ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆಯೇ ವಿನಃ, ವಿದೇಶಕ್ಕೆ ಪರಾರಿಯಾಗಿಲ್ಲ ಎಂದು ಪ್ರಧಾನಿ ಸ್ಪಷ್ಟನೆ ನೀಡಿದ್ದರು.