ಈಜಿಪ್ಟ್‌ನ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸಿದ ಸಾರ್ವಜನಿಕ ಸಂಪರ್ಕ ಜಾಲವಾದ 'ಫೇಸ್ ಬುಕ್'ನ ಹೆಸರನ್ನೇ ಇಲ್ಲಿನ ವ್ಯಕ್ತಿಯೊಬ್ಬರು ತನ್ನ ಹೆಣ್ಣು ಮಗುವಿಗೆ ನಾಮಕರಣ ಮಾಡುವ ಮೂಲಕ ತನ್ನ ಅಭಿಮಾನ ಮೆರೆದಿದ್ದಾರೆ. ಮಗುವಿನ ಪೂರ್ಣ ಹೆಸರು ಫೇಸ್‌ಬುಕ್ ಜಮಾಲ್ ಇಬ್ರಾಹಿಂ!.
ತಾಹ್ರಿರ್ ಸ್ಕ್ವೇರ್ ಸೇರಿದಂತೆ ಈಜಿಪ್ಟ್‌ನ ಇತರ ನಗರಗಳಾದ್ಯಂತ ಜನರನ್ನು ಸಂಘಟಿಸಿ ಹೋರಾಟಕ್ಕೆ ಅಣಿಗೊಳಿಸುವಲ್ಲಿ ಫೇಸ್‌ಬುಕ್ ಜಾಲ ನಿರ್ವಹಿಸಿದ ಪಾತ್ರ ಅಪಾರವಾದುದೆಂದು ಹೊಗಳಿರುವ ಜಮಾಲ್ ಇಬ್ರಾಹಿಂ ತನ್ನ ಮಗುವಿಗೆ ಈ ಹೆಸರಿಟ್ಟಿದ್ದಾರೆ ಎಂದು ಅಲ್-ಅಹ್ರಮ್ ಪತ್ರಿಕೆ ವರದಿ ಮಾಡಿದೆ.
ಹೋರಾಟಕ್ಕೆ ತಮ್ಮ ಬೆಂಬಲ ಮುಂದುವರಿಸುತ್ತಾ ಬರಲು ನಾವು ಫೇಸ್‌ಬುಕ್ ಜಾಲವನ್ನು ಅನುಸರಿಸುತ್ತಿದ್ದುದಾಗಿ ಮಗುವಿನ ನಾಮಕರಣದಲ್ಲಿ ನೆರೆದಿದ್ದ ಬಂದು ಮಿತ್ರರು ತಿಳಿಸಿದ್ದಾರೆ ಎಂದು ಡೈಲಿಮೇಲ್ ಪತ್ರಿಕೆ ವರದಿ ಮಾಡಿದೆ.
ಹೊಸ್ನಿ ಮುಬಾರಕ್ ಅಧ್ಯಕ್ಷಗಾದಿಯಿಂದ ಕೆಳಗಿಳಿದ ನಂತರ ಈಜಿಪ್ಟ್ ರಾಜಧಾನಿ ಕೈರೋದಾದ್ಯಂತ 'ಥ್ಯಾಂಕ್ಯೂ ಫೇಸ್‌ಬುಕ್' ಎಂಬ ಗೋಡೆ ಬರಹ ರಾರಾಜಿಸುತ್ತಿದೆ.
'ಮಧ್ಯ ಈಶಾನ್ಯ ಆಫ್ರಿಕಾ ಪ್ರಾಂತ್ಯದಲ್ಲಿ ಪ್ರಜಾಪ್ರಭುತ್ವವನ್ನು ನೆಲೆಗೊಳಿಸಿದಕ್ಕೆ ಎಲ್ಲಾ ಅಂತರ್‌ಜಾಲಗಳೂ ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲಲೇಬೇಕು. ಮಗುವಿಗೆ ಹೆಸರನ್ನಿಡುವ ಮೂಲಕ ಅದನ್ನು ಅಲ್ಲಿಗೇ ಬಿಟ್ಟುಬಿಡಬಾರದು' ಎಂದು ಇಲ್ಲಿನ ನಿವಾಸಿಯೊಬ್ಬರು ತನ್ನ ಬ್ಲಾಗ್‌ನಲ್ಲಿ ತಿಳಿಸಿದ್ದಾರೆ.