ಬಾಂಗ್ಲಾದೇಶದ ಸ್ಥಾಪಕ ಅಧ್ಯಕ್ಷ ಶೇಕ್ ಮುಜಿಬುರ್ ರಹಮಾನ್ ಅವರ ಹತ್ಯೆ ಪ್ರಕರಣದಲ್ಲಿ ಆರು ಮಂದಿ ದೋಷಿತರಾಗಿದ್ದು, ಅದರಲ್ಲಿ ತಲೆ ತಪ್ಪಿಸಿಕೊಂಡು ಕೆನಡಾದಲ್ಲಿ ಆಶ್ರಯ ಪಡೆದಿರುವ ಹಂತಕನನ್ನು ಗಡಿಪಾರು ಮಾಡುವಂತೆ ಬಾಂಗ್ಲಾ ಮನವಿ ಮಾಡಿದೆ.
ಕೆನಡಾದಲ್ಲಿ ಆಶ್ರಯ ಪಡೆಯದಿರುವ ಆರೋಪಿಯನ್ನು ಗಡಿಪಾರು ಮಾಡುವ ಕುರಿತು ಕಳೆದ ವಾರ ಓಟ್ಟಾವಾದಲ್ಲಿ ನಡೆದ ಸಭೆಯಲ್ಲಿ ಬಾಂಗ್ಲಾ ವಿದೇಶಾಂಗ ಸಚಿವ ಡಿಪು ಮೋನಿ ಅವರು ಕೆನಡಾ ವಿದೇಶಾಂಗ ಸಚಿವ ಲಾರೆನ್ಸ್ ಕೆನ್ನೊನ್ ಜತೆ ಮಾತುಕತೆ ನಡೆಸಿದ್ದರು.
ಎಸ್.ಎಚ್.ಎಂ.ಬಿ.ನೂರ್ ಚೌಧುರಿಯನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಲು ಯಾವುದಾದರು ಕಾನೂನು ತೊಡಕು ಇದೆಯಾ ಎಂಬುದಾಗಿ ಮೋನಿ ಕೆನಡಾ ಸಚಿವರನ್ನು ಪ್ರಶ್ನಿಸಿರುವುದಾಗಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ನ್ಯೂ ಏಜ್ ಪತ್ರಿಕೆಗೆ ಖಚಿತಪಡಿಸಿದ್ದಾರೆ.
ಕೆನಡಾದಲ್ಲಿ ವಾಸ್ತವ್ಯ ಹೂಡಿರುವ ಚೌಧುರಿ ತನ್ನನ್ನು ಕೆನಡಾ ಪ್ರಜೆಯನ್ನಾಗಿ ಅಥವಾ ಆಶ್ರಯದ ನೆಲೆಯಲ್ಲಿ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದ್ದಾನೆ. ಒಂದು ವೇಳೆ ತನ್ನನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಿದರೆ ಗಲ್ಲಿಗೇರಿಸುತ್ತಾರೆ ಎಂಬುದಾಗಿ ಅಲವತ್ತುಕೊಂಡಿದ್ದ.
ಕೆನಡಾ ಕಾನೂನಿನ್ವಯ ಗಲ್ಲಿಗೇರಿಸಲು ಅವಕಾಶ ಇಲ್ಲ. ಹಾಗಾಗಿ ಚೌಧುರಿಯನ್ನು ಬಾಂಗ್ಲಾಕ್ಕೆ ಗಡಿಪಾರು ಮಾಡಲು ಕಾನೂನು ತೊಡಕು ಇದೆ ಎಂದು ಕೆನಡಾ ತಿಳಿಸಿದೆ.
ಮುಜಿಬುರ್ ಹತ್ಯಾ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾಧೀನ ನ್ಯಾಯಾಲಯ 1998ರಲ್ಲಿ ಚೌಧುರಿಗೆ ಮರಣದಂಡನೆ ವಿಧಿಸಿತ್ತು. ಬಳಿಕ ಹೈಕೋರ್ಟ್ ಕೂಡ ಶಿಕ್ಷೆಯನ್ನು ಎತ್ತಿಹಿಡಿದಿತ್ತು. 2009ರ ನವೆಂಬರ್ 19ರಂದು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದಾಗಲೂ ಕೂಡ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನೇ ಎತ್ತಿಹಿಡಿಯುವ ಮೂಲಕ ನೂರ್ ಚೌಧುರಿ ಮುಖಭಂಗ ಅನುಭವಿಸಿದ್ದ.
ಪ್ರಕರಣದ ಇನ್ನುಳಿದ ಆರೋಪಿಗಳಾದ ಸೈಯದ್ ಫಾರೂಕ್ ರಹಮಾನ್, ಸುಲ್ತಾನ್ ರಾಶಿದ್ ಖಆನ್, ಬಾಜುಲ್ ಹುಡಾ, ಎ.ಕೆ.ಎಂ.ಮೊಹಿಯುದ್ದೀನ್ ಅಹ್ಮದ್ ಹಾಗೂ ಮೊಹಿಯುದ್ದೀನ್ ಅಹ್ಮದ್‌ನನ್ನು 2010 ಜನವರಿ 28ರಂದು ಗಲ್ಲಿಗೇರಿಸಲಾಗಿತ್ತು.