ಇಸ್ಲಾಮಾಬಾದ್, ಬುಧವಾರ, 23 ಫೆಬ್ರವರಿ 2011( 15:38 IST )
ಬಂಧಿತ ಅಮೆರಿಕಾ ಅಧಿಕಾರಿ ರೇಮಂಡ್ ಡೇವಿಸ್‌ಗೆ ತಾಲಿಬಾನ್ ಉಗ್ರರೊಂದಿಗೆ ನಿಕಟ ಸಂಪರ್ಕವಿದೆ ಹಾಗೂ ಉಗ್ರ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿಕೊಳ್ಳುವಲ್ಲಿಯೂ ಈತನ ಪ್ರಮುಖ ಕೈವಾಡವಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಅಮೆರಿಕಾ ಬೇಹುಗಾರಿಕಾ ಸಂಸ್ಥೆಯ (ಸಿಐಎ) ಭದ್ರತಾ ಗುತ್ತಿಗೆದಾರನಾಗಿ ಡೇವಿಸ್ ಕಾರ್ಯನಿರ್ವಹಿಸುತ್ತಿರುವುದಾಗಿ ಅಮೆರಿಕಾದ ಪತ್ರಿಕೆಯೊಂದು ವರದಿ ಮಾಡಿದ ಬೆನ್ನಲ್ಲೇ, ಪಂಜಾಬ್ ಪ್ರಾಂತ್ಯದ ಹೆಸರು ಹೇಳಲು ಬಯಸದ ಪೊಲೀಸ್ ಅಧಿಕಾರಿಯೊಬ್ಬರು ಆತ ತೆಹರಿಕ್ ಎ ತಾಲಿಬಾನ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದನ್ನು ಪಾಕ್‌ನ ಪತ್ರಿಕೆ 'ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ.
'ಲಾಹೋರ್ ಮತ್ತು ಪಂಜಾಬ್'ನ ಇತರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಭಯೋತ್ಪಾದನಾ ಚಟುವಟಿಕೆಗಳಿಗೆ ಡೇವಿಸ್‌ನೇ ಸೂತ್ರಧಾರ ಎಂದು ಶಂಕಿಸಿರುವುದಾಗಿ ಪಂಜಾಬ್ ಪೊಲೀಸ್‌ನ ಹಿರಿಯ ಅಧಿಕಾರಿಯ ಹೇಳಿಕೆಯನ್ನು ಪತ್ರಿಕೆ ವರದಿ ಮಾಡಿದೆ.
'ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಭಯೋತ್ಪಾದನಾ ಸಂಘಟನೆಯೊಂದಿಗೆ ಡೇವಿಸ್ ಹೊಂದಿರುವ ನಿಕಟ ಸಂಬಂಧ ತನಿಖೆಯಿಂದ ಬಹಿರಂಗಗೊಂಡಿತು. ಅಲ್ಲದೆ ಭಯೋತ್ಪಾದನಾ ರಕ್ತಪಾತ ನಡೆಸಲು ಪಂಜಾಬಿನ ಯುವಕರನ್ನು ತಾಲಿಬಾನ್‌ಗೆ ನೇಮಕ ಮಾಡಿಕೊಳ್ಳುವುದರಲ್ಲಿ ಪ್ರಮುಖ ಸೂತ್ರಧಾರನಾಗಿಯೂ ಈತ ಕಾರ್ಯನಿರ್ವಹಿಸುತ್ತಿದ್ದ' ಎಂಬ ಅಧಿಕಾರಿಯ ಹೇಳಿಕೆಯನ್ನು ಪತ್ರಿಕೆ ಉಲ್ಲೇಖಿಸಿದೆ.
ಅಲ್ಲದೆ ಡೇವಿಸ್‌ನ ಮೊಬೈಲ್ ಕರೆಗಳನ್ನು ಪರಿಷ್ಕರಿಸಿದಾಗ ಅದರಲ್ಲಿ ನಿಷೇಧಿತ ಭಯೋತ್ಪಾದನಾ ಸಂಘಟನೆ ಲಷ್ಕರ್ ಎ ಜಾಂಗ್ವಿ ಮತ್ತು ತಾಲಿಬಾನ್ ಸಂಘಟನೆಗೆ ಸೇರಿದ 27 ಉಗ್ರರು ಸೇರಿದಂತೆ 33 ಪಾಕಿಸ್ತಾನಿಗಳೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ ಎಂದೂ ಪತ್ರಿಕಾ ವರದಿ ವಿವರಿಸಿದೆ.