ಇಸ್ಲಾಮಾಬಾದ್, ಶುಕ್ರವಾರ, 25 ಫೆಬ್ರವರಿ 2011( 18:45 IST )
ಪಾಕಿಸ್ತಾನ ನೈರುತ್ಯ ಭಾಗದ ಬಲೂಚಿಸ್ತಾನ ರಾಜಕಾರಣಿಗಳ ಹತ್ಯೆ, ಅಪಹರಣದ ಹಿಂದೆ ಪಾಕಿಸ್ತಾನದ ಭದ್ರತಾ ಏಜೆನ್ಸಿಯ ಕೈವಾಡ ಇರುವುದಾಗಿ ಪಿಎಂಎಲ್-ಎನ್‌ನ ಸಂಸದರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.
ನಿವೃತ್ತ ಲೆಫ್ಟಿನೆಂಟ್ ಜನರಲ್ ಅಬ್ದುಲ್ ಖಾದ್ರಿ ಬಲೂಚ್ ಅವರು ಕ್ವೆಟ್ಟಾದಲ್ಲಿ ಆರ್ಮಿಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಬಲೂಚಿಸ್ತಾನದ ಗವರ್ನರ್ ಆಗಿದ್ದು, ಗುರುವಾರ ಸಂಸತ್‌ನಲ್ಲಿ ಮಾತನಾಡುತ್ತ ಈ ರೀತಿಯಾಗಿ ದೂರಿದ್ದಾರೆ.
ಅಷ್ಟೇ ಅಲ್ಲ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಪಾಕಿಸ್ತಾನ ಭದ್ರತಾ ಏಜೆನ್ಸಿ ಹಾಗೂ ಇಂಟೆಲಿಜೆನ್ಸ್ ಏಜೆನ್ಸಿ (ಐಎಸ್ಐ)ಯ ಪಾತ್ರವಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಒಂದು ವೇಳೆ ಭದ್ರತಾ ಏಜೆನ್ಸಿ ತಪ್ಪಿತಸ್ಥ ಅಲ್ಲ ಎಂದಾದರೆ, ದಿನಂಪ್ರತಿ ನಡೆಯುತ್ತಿರುವ ಜನರ ಅಪಹರಣ, ಬೀದಿ ಬದಿಯಲ್ಲಿ ಸಿಗುವ ಮೃತಶವಗಳಿಗೆ ಹೊಣೆಗಾರರು ಯಾರು ಎಂದಿದ್ದಾರೆ. ಹಾಗಾದರೆ ಆರೋಪಿಗಳನ್ನು ಸೆರೆ ಹಿಡಿದು ಕೋರ್ಟ್‌ಗೆ ಯಾಕೆ ಹಾಜರುಪಡಿಸುತ್ತಿಲ್ಲ ಎಂದು ಅವರು ಭದ್ರತಾ ಏಜೆನ್ಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆ ನಿಟ್ಟಿನಲ್ಲಿ ಬಲೂಚಿಸ್ತಾನದಲ್ಲಿನ ರಾಜಕೀಯ ನೇತಾರರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆಯನ್ನು ನೀಡಬೇಕಾದ ಅಗತ್ಯವಿದೆ ಎಂದು ಬಲೂಚ್ ಮನವಿ ಮಾಡಿಕೊಂಡಿದ್ದಾರೆ.