ಉಗ್ರ ಸಂಘಟನೆ ಅಲ್-ಖಾಯಿದಾ ಮಾದರಿಯಲ್ಲೇ ಇಂಡೋನೇಷ್ಯಾದಲ್ಲೂ ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪವನ್ನು ಮೌಲ್ವಿ ಅಬು ಬಕರ್ ಬಶೀರ್ ನಿರಾಕರಿಸಿದ್ದಾರೆ. ಗುರುವಾರ ಬಿಗಿ ಭದ್ರತೆಯಲ್ಲಿ ನಡೆದ ಮರುವಿಚಾರಣೆಯ ವೇಳೆ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಉಗ್ರರ ತಾಣ ಎಂದೇ ಕುಖ್ಯಾತವಾಗಿರುವ ಇಂಡೋನೇಷ್ಯಾದ ಏಕ್ ಪ್ರಾಂತ್ಯದಲ್ಲಿರುವ ಇಸ್ಲಾಂ ಭಯೋತ್ಪಾದಕರ ಧಾರ್ಮಿಕ ಗುರು ಎಂದೇ ಮೌಲ್ವಿ ಅಬು ಬಕರ್ ಬಶೀರ್ ಗುರುತಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವುದು ಕಳೆದ ವರ್ಷವಷ್ಟೇ ಬೆಳಕಿಗೆ ಬಂದಿತ್ತು.
ಮೌಲ್ವಿ ಅಬು ಬಕರ್ ಬಶೀರ್‌ನನ್ನು ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ಎಪ್ಪತ್ತೆರಡು ವರ್ಷದ ಬಡಕಲು ದೇಹದ ಈತ ನ್ಯಾಯಾಲಯ ತಲುಪುತ್ತಿದ್ದಂತೆ ಆತನ ಸುಮಾರು ಇನ್ನೂರಕ್ಕಿಂತಲೂ ಹೆಚ್ಚು ಕಟ್ಟಾ ಅನುಯಾಯಿಗಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ನ್ಯಾಯಾಲಯಕ್ಕೆ ನುಗ್ಗಲು ಯತ್ನಿಸಿದರು. ಇವರನ್ನು ಹತೋಟಿಗೆ ತರುವಷ್ಟರಲ್ಲಿ ಪೊಲೀಸರಿಗೆ ಸಾಕುಸಾಕಾಯಿತು.
88ನೇ ಭಯೋತ್ಪಾದನಾ ನಿಗ್ರಹ ಪಡೆಯ ಭಿಗಿ ಭದ್ರತೆಯಲ್ಲಿದ್ದ ಬಶೀರ್, ತನ್ನ ಧಾರ್ಮಿಕ ವಸ್ತ್ರವಾದ ಉದ್ದದ ಜುಬ್ಬಾ, ಶಾಲು, ತಲೆಗೊಂದು ಟೋಪಿ ತೊಟ್ಟು ಪ್ರಶಾಂತ ಚಿತ್ತದಿಂದ ಮುಗುಳ್ನಗುತ್ತಾ 'ಇಸ್ಲಾಂನ ಶರಿಯಾ ಕಾನೂನಿನಿಂದ ನಾನು ಪ್ರಭಾವಿತನಾಗಿದ್ದು, ಮುಸಲ್ಮಾನರ ವಿರೋಧಿಗಳನ್ನು ಹತ್ತಿಕ್ಕಲು ದೇವರು ಆದೇಶಿಸಿರುವಂತೆ, ಏಕ್ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ದೈಹಿಕ ಮತ್ತು ಆಯುಧ ತರಬೇತಿ ನೀಡುತ್ತಿರುವುದು ಆರಾಧನೆಯ ಒಂದು ಭಾಗವಷ್ಟೆ' ಎಂದು ತನ್ನಲ್ಲಿದ್ದ ತೊಂಬತ್ತು ಪುಟದ ರಕ್ಷಣಾ ದಾಖಲೆಯಲ್ಲಿದ್ದ ಕೆಲವು ಸಾಲುಗಳನ್ನು ಉಲ್ಲೇಖಿಸಿದರು.
ಈ ದೈಹಿಕ ಮತ್ತು ಶಸ್ತ್ರಾಭ್ಯಾಸ ಪ್ರಾರ್ಥನೆ ಮತ್ತು ಉಪವಾಸಕ್ಕೆ ಸಮನಾದುದು. ಆದರೆ ಈ ಪವಿತ್ರ ಕಾರ್ಯ ದೇವರ ವಿರೋಧಿಗಳಿಂದ ಅವಮಾನಕ್ಕೀಡಾಗಿದೆ. ಸಮರಾಭ್ಯಾಸ ನಡೆಸುತ್ತಿರುವುದನ್ನೇ 88 ನೇ ಭದ್ರತಾ ಪಡೆ ಭಯೋತ್ಪಾದನೆಯೆಂದು ಆರೋಪಿಸಿದೆ ಎಂದಿದ್ದಾರೆ ಬಶೀರ್.
ಪ್ರಜೆಗಳಿಂದ ಆಯ್ಕೆಯಾದ ಸರಕಾರವನ್ನು 'ವಿಷಕಾರಕ' ಎಂದಿರುವ ಬಶೀರ್, ಇಸ್ಲಾಂನ ಭಯೋತ್ಪಾದಕರಿಂದ ವರ್ಷಾನುಗಟ್ಟಲೆ ತೀವ್ರ ಹಿಂಸೆ, ಕಿರುಕುಳಕ್ಕೆ ಒಳಗಾದ ಅಲ್ಪ ಸಂಖ್ಯಾತ ಮುಸಲ್ಮಾನರನ್ನು ರಕ್ಷಿಸಲು ಕಾನೂನು ರೂಪಿಸಲು ಈ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.
ಬಶೀರ್ ಎದುರಿಸುತ್ತಿರುವ ಆರೋಪಗಳಲ್ಲಿ ಪ್ರಮುಖವಾದ ಅಕ್ರಮ ಸಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಉಗ್ರ ಸಂಘಟನೆಗಳಿಗೆ ಹಣಕಾಸು ನೀಡಿರುವುದು ಸಾಬೀತಾಗಿ ತಪ್ಪಿತಸ್ಥ ಎಂದಾದರೆ ಮರಣ ದಂಡನೆಗೆ ಗುರಿಯಾಗಬೇಕಾಗುತ್ತದೆ.
ಏಕ್ ಪ್ರದೇಶದಲ್ಲಿ ಅಲ್ ಖಾಯಿದಾ ಎಂದು ನಂಬಲಾಗಿರುವ ಉಗ್ರ ಸಂಘಟನೆಯೊಂದು ಮುಂಬೈ ದಾಳಿಯ ಶೈಲಿಯಲ್ಲಿ ಆತ್ಮಹತ್ಯಾ ಬಂದೂಕುದಾರಿಗಳನ್ನು ಸಜ್ಜುಗೊಳಿಸಿ ಪಾಶ್ಚಾತ್ಯರ ಮೇಲೆ ದಾಳಿನಡೆಸಲು ಸಂಚು ಹೂಡುತ್ತಿದೆ ಎಂದು ಇಂಡೋನೇಷ್ಯಾದ ಅಧ್ಯಕ್ಷ ಸುಸಿಲೊ ಬಂಬೇಂಗ್ ಯುಧೊಯೊನೊ ಸೇರಿದಂತೆ ಭದ್ರತಾ ಮೂಲಗಳು ತಿಳಿಸಿವೆ ಎಂದು ಪೊಲೀಸರು ಹೇಳಿದ್ದಾರೆ.