ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಸಬ್ 'ಘೋಷಿತ ಅಪರಾಧಿ' ಎನ್ನಲು ಆಗಲ್ಲ: ಪಾಕ್ ಕೋರ್ಟ್ (Lahore High Court | Ajmal Kasab | proclaimed offender | Mumbai terror attacks)
ಕಸಬ್ 'ಘೋಷಿತ ಅಪರಾಧಿ' ಎನ್ನಲು ಆಗಲ್ಲ: ಪಾಕ್ ಕೋರ್ಟ್
ರಾವಲ್ಪಿಂಡಿ, ಶನಿವಾರ, 26 ಫೆಬ್ರವರಿ 2011( 09:09 IST )
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಪಾಕಿಸ್ತಾನದ ಕ್ರಿಮಿನಲ್ ಪ್ರೊಸಿಜರ್ ಕೋಡ್ ಅನ್ವಯ 'ಘೋಷಿತ ಅಪರಾಧಿ' ಎಂದು ಘೋಷಿಸಲು ಪಾಕಿಸ್ತಾನದ ಲಾಹೋರ್ ಹೈಕೋರ್ಟ್ ತಿರಸ್ಕರಿಸಿದೆ.
ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಏಳು ಮಂದಿಯನ್ನು ಬಂಧಿಸಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಆ ನಿಟ್ಟಿನಲ್ಲಿ ಪ್ರಕರಣದ ಪ್ರಮುಖ ರೂವಾರಿಗಳಾದ ಅಜ್ಮಲ್ ಕಸಬ್ ಹಾಗೂ ಫಾಹೀಮ್ ಅನ್ಸಾರಿಯನ್ನು ಘೋಷಿತ ಅಪರಾಧಿಗಳೆಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಆ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಿಮಿನಲ್ ಪ್ರೊಸಿಜರ್ ಕೋಡ್ ಅಡಿಯಲ್ಲಿ ಅಜ್ಮಲ್ ಕಸಬ್‌ನನ್ನು ಘೋಷಿತ ಅಪರಾಧಿ ಎಂದು ಘೋಷಿಸಬೇಕೆಂಬ ಮನವಿಯ ಅರ್ಜಿಯನ್ನು ವಾಪಸ್ ಪಡೆಯುವಂತೆ ಕೋರ್ಟ್ ಎಫ್ಐಎಗೆ ನಿರ್ದೇಶನ ನೀಡಿದೆ. ಯಾಕೆಂದರೆ ಅಜ್ಮಲ್ ಬಂಧಿತ ಆರೋಪಿ ವಿನಃ, ತಲೆತಪ್ಪಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ದೋಷಿಯಾಗಿರುವ ಅಜ್ಮಲ್‌ನನ್ನು ನಮ್ಮ ಕಸ್ಟಡಿಗೆ ಒಪ್ಪಿಸಲು ಭಾರತದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಪ್ರಾಸಿಕ್ಯೂಷನ್ ವಕೀಲರು ಕೋರ್ಟ್‌ಗೆ ತಿಳಿಸಿದ್ದು, ಈ ಬಗ್ಗೆ ಗಮನಹರಿಸಬೇಕೆಂದು ಮನವಿ ಮಾಡಿಕೊಂಡರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿರುವುದಾಗಿ ಎಫ್ಐಎ ವಕೀಲರು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದು, ಕಸಬ್ ಮತ್ತು ಅನ್ಸಾರಿ ಕುರಿತಂತೆ ವಿಚಾರಣಾಧೀನ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದರು.