ಇಸ್ಲಾಮಾಬಾದ್, ಶನಿವಾರ, 26 ಫೆಬ್ರವರಿ 2011( 11:49 IST )
ದೇಶದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಆಡಳಿತರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸ್ಪಷ್ಟನೆ ನೀಡಿದೆ.
ಈ ಹೇಳಿಕೆಯ ಬೆನ್ನಲ್ಲೇ, ಪಂಜಾಬ್ ಪ್ರಾಂತ್ಯದ ಪಿಪಿಪಿ ನೇತೃತ್ವದ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದಿರುವುದಾಗಿ ಪಿಎಂಎಲ್-ಎನ್ ವರಿಷ್ಠ ನವಾಜ್ ಶರೀಫ್ ಘೋಷಿಸಿದ್ದಾರೆ. ಆದರೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಿಪಿಪಿ ಐದು ವರ್ಷಗಳ ಕಾಲ ತನ್ನ ಆಡಳಿತವನ್ನು ಪೂರ್ಣಗೊಳಿಸುವ ವಿಶ್ವಾಸ ಇರುವುದಾಗಿ ತಿಳಿಸಿದೆ.
ದೇಶದಲ್ಲಿ ರಾಜಕೀಯ ಬಿಕ್ಕಟ್ಟಿನ ಸ್ಥಿತಿ ಇಲ್ಲ. ಅಲ್ಲದೇ ಮಧ್ಯಂತರ ಚುನಾವಣೆಯೂ ನಡೆಯುವುದಿಲ್ಲ ಎಂದು ಪಿಪಿಪಿ ಹಿರಿಯ ಮುಖಂಡ ರಾಜಾ ರಬ್ಬಾನಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ತಿಳಿಸಿದ್ದಾರೆ. ಯಾವುದೇ ಬಿಕ್ಕಟ್ಟಿದ್ದರೂ ಪಿಪಿಪಿ ಎಲ್ಲಾ ರಾಜಕೀಯ ಪಕ್ಷಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಅವರು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಫೆಡರಲ್ ಗವರ್ನಮೆಂಟ್‌ನ ಹತ್ತು ಅಂಶಗಳ ಅನುಷ್ಠಾನಕ್ಕೆ ಕುರಿತಂತೆ ಪಿಪಿಪಿಗೆ ನೀಡಿರುವ ಅಂತಿಮ ಗಡುವು ಮುಗಿದಿದೆ. ಹಾಗಾಗಿ ನಮ್ಮ ದಾರಿಯನ್ನು ನಾವು ಕಂಡುಕೊಳ್ಳುತ್ತಿರುವುದಾಗಿ ಪಿಎಂಎಲ್-ಎನ್ ತಿಳಿಸಿದೆ. ಇದರೊಂದಿಗೆ ಪಂಜಾಬ್ ಪ್ರಾಂತ್ಯದಲ್ಲಿ ಬಿಕ್ಕಟ್ಟು ಉದ್ಭವಿಸಿದಂತಾಗಿದೆ.