ಅಮೆರಿಕದಲ್ಲಿ ನಡೆದ 9/11ರ ಭಯೋತ್ಪಾದನಾ ದಾಳಿಯ ಪ್ರಮುಖ ರೂವಾರಿ ಒಸಾಮಾ ಬಿನ್ ಲಾಡೆನ್ ಇನ್ನೂ ಜೀವಂತವಾಗಿದ್ದು, ತನ್ನ ಅಲ್ ಖಾಯಿದಾ ಸಂಘಟನೆ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ಲಾಡೆನ್ ನಿಕಟವರ್ತಿ ಐಮನ್ ಅಲ್ ಜವಾಹಿರಿ ಬಹಿರಂಗಪಡಿಸಿದ್ದಾನೆ.
ನೂತನವಾಗಿ ಬಿಡುಗಡೆ ಮಾಡಿರುವ ಆನ್‌ಲೈನ್ ವೀಡಿಯೋದಲ್ಲಿ ಈ ವಿಷಯ ತಿಳಿಸಿರುವ ಜವಾಹಿರಿ, ಅಲ್ ಖಾಯಿದಾ ಸಂಘಟನೆ ಮುಸ್ಲಿಮ್ ನಾಗರಿಕರ ಮೇಲೆ ದಾಳಿ ನಡೆಸುವುದನ್ನು ತಪ್ಪಿಸಬೇಕೆಂದು ಒಸಾಮಾ ಆದೇಶ ನೀಡಿರುವುದಾಗಿ ಹೇಳಿದ್ದಾನೆ.
9/11ರ ದಾಳಿಯ ನಂತರ ಒಸಾಮಾ ಬಿನ್ ಲಾಡೆನ್ ಮತ್ತು ಐಮನ್ ಅಲ್ ಜವಾಹಿರಿ ತಲೆಮರೆಸಿಕೊಂಡಿದ್ದು, ಅಮೆರಿಕ ಅವರ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು.
ಅರಬ್ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅಲ್ ಖಾಯಿದಾ ಸಂಘಟನೆ ತೊಡಗಿಸಿಕೊಳ್ಳಲು ಯತ್ನಿಸುತ್ತಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಶುಕ್ರವಾರ ಇರಾಕ್ ಮಿಲಿಟರಿ ಪಡೆ ಅಲ್ ನಾಸ್ಸೆರ್ ಲಿಡ್ಡೆನ್ ಅಲ್ಲಾಹ್ ಅಬು ಸುಲೈಮಾನ್‌ನನ್ನು ಹತ್ಯೆಗೈದಿದೆ. ಇದರಿಂದಾಗಿ ದೇಶದಲ್ಲಿ ನಡೆಯುತ್ತಿರುವ ದಾಳಿಯ ಹಿಂದೆ ಅಲ್ ಖಾಯಿದಾ ಸಕ್ರಿಯವಾಗಿ ಭಾಗಿಯಾಗಿದೆ ಎಂದು ವರದಿ ಹೇಳಿದೆ.