ಸರ್ವಾಧಿಕಾರಿ ಅಧ್ಯಕ್ಷ ಮೊಮ್ಮರ್ ಗಡ್ಡಾಫಿ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಅಮೆರಿಕ ಟ್ರೈಪೋಲಿಯಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಬಂದ್ ಮಾಡಿ ಲಿಬಿಯಾದ ಮೇಲೆ ನಿರ್ಬಂಧ ಹೇರಿದೆ. ಅಲ್ಲದೇ ಬಿಲಿಯನ್ ಡಾಲರ್‌ನಷ್ಟು ಸರಕಾರಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಲಿಬಿಯಾದ ಮೇಲೆ ಅಮೆರಿಕ ನಿರ್ಬಂಧ ಹೇರಿದ್ದ ಬೆನ್ನಲ್ಲೇ ಅಮೆರಿಕನ್ ಪ್ರಜೆಗಳು ವಿಮಾನದಲ್ಲಿ ಲಿಬಿಯಾ ತೊರೆದು ಸ್ವದೇಶಕ್ಕೆ ಪ್ರಯಾಣಿಸಿದ್ದಾರೆ. ಕರ್ನಲ್ ಮೊಮ್ಮರ್ ಗಡ್ಡಾಫಿ ನೇತೃತ್ವದ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿರುವುದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ.
ಗಡ್ಡಾಫಿ ಸರ್ವಾಧಿಕಾರದ ವಿರುದ್ಧ ಜನ ರೊಚ್ಚಿಗೆದ್ದಿದ್ದಾರೆ. ಆ ನಿಟ್ಟಿನಲ್ಲಿ ಗಡ್ಡಾಫಿ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕಾರ್ನೈ ತಿಳಿಸಿದ್ದಾರೆ.
ಲಿಬಿಯಾದ ವಿರುದ್ಧ ದಿಗ್ಬಂಧನಗಳನ್ನು ಹೇರುವ ಕುರಿತು ಶ್ವೇತಭವನದಲ್ಲಿ ಶುಕ್ರವಾರ ಸಭೆ ನಡೆದಿತ್ತು. ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಲಿಯ ಟಾಮ್ ಮ್ಯಾಲಿನೋಸ್ಕಿ ಮತ್ತಿತರ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮತ್ತೊಂದೆಡೆ ಅಮೆರಿಕದ ಹಣಕಾಸು ಇಲಾಖೆ ಕೂಡ ಲಿಬಿಯಾ ಮೇಲೆ ಏಕಪಕ್ಷೀಯವಾಗಿ ದಿಗ್ಬಂಧನಗಳನ್ನು ಹೇರುವ ಸಾಧ್ಯತೆಗಳ ಕುರಿತು ಚರ್ಚೆ ನಡೆಸಿತ್ತು.
ಅಧ್ಯಕ್ಷ ಬರಾಕ್ ಒಬಾಮ ನಿರ್ದೇಶನದ ಮೇರೆಗೆ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಜಿನೀವಾಕ್ಕೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಅಲ್ಲಿ ಫೆ.27-28ರಂದು ನಡೆಯುವ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಲಿಯ ಸಮಾವೇಶದಲ್ಲಿ ಲಿಬಿಯಾ ಕುರಿತು ಚರ್ಚೆ ನಡೆಯಲಿದೆ. ಹಿಲರಿ ಅವರು ಈ ಸಂದರ್ಭದಲ್ಲಿ ಮುಅಮ್ಮರ್ ಗಡಾಫಿ ಅವರ ವಿರುದ್ಧ ಜಾಗತಿಕ ಸಮುದಾಯದ ಅಭಿಪ್ರಾಯ ಕ್ರೋಡೀಕರಿಸಲು ಯತ್ನಿಸಲಿದ್ದಾರೆ.