'ನಮ್ಮ ಕುಟುಂಬ ಇಲ್ಲಿಯೇ ಇರುತ್ತದೆ ಮತ್ತು ಲಿಬಿಯಾದಲ್ಲಿಯೇ ಸಾಯುತ್ತೇವೆ' ಎಂದು ಲಿಬಿಯಾ ಸರ್ವಾಧಿಕಾರಿ ಮೊಮ್ಮರ್ ಗಡ್ಡಾಫಿ ಪುತ್ರ ಶಪಥಗೈದಿದ್ದು, ಯಾವುದೇ ಕಾರಣಕ್ಕೂ ಉಗ್ರರು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಲಿಬಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಟರ್ಕಿ ಟಿವಿ ಗಡ್ಡಾಫಿ ಪುತ್ರನ ಸಂದರ್ಶನ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಜನರ ಒತ್ತಡಕ್ಕೆ ಮಣಿದು ನಿಮ್ಮ ಕುಟುಂಬ ಲಿಬಿಯಾ ತೊರೆದು ಹೋಗಲಿದೆಯಾ ಎಂಬ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದರು.
ನಾವು ಇಲ್ಲಿಯೇ ವಾಸಿಸುತ್ತೇವೆ, ಇಲ್ಲಿಯೇ ಸಾಯುತ್ತೇವೆ ಎಂದು ಸೈಫ್ ಅಲ್ ಇಸ್ಲಾಮ್ ಗಡ್ಡಾಫಿ ಸ್ಪಷ್ಟಪಡಿಸಿದ್ದಾರೆ. ಈಜಿಪ್ಟ್, ಟ್ಯುನಿಷಿಯಾದಲ್ಲಿ ಸರ್ವಾಧಿಕಾರಿ ಅಧ್ಯಕ್ಷರ ವಿರುದ್ಧ ಜನರು ತೀವ್ರ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಎರಡೂ ದೇಶಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದರು.
ಅದರ ಬೆನ್ನಲ್ಲೇ ಕಳೆದ 41 ವರ್ಷದಿಂದ ಲಿಬಿಯಾದ ಅಧ್ಯಕ್ಷಗಾದಿಯಲ್ಲಿದ್ದ ಮೊಮ್ಮರ್ ಗಡ್ಡಾಫಿ ಕೂಡಲೇ ಗದ್ದುಗೆಯಿಂದ ಕೆಳಗಿಳಿಯಬೇಕೆಂದು ಒತ್ತಾಯಿಸಿ ಫೆ.14ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಆ ನಿಟ್ಟಿನಲ್ಲಿ ಈಜಿಪ್ಟ್ ಮತ್ತು ಟ್ಯುನಿಷಿಯಾದಲ್ಲಿ ನಡೆದ ಪ್ರತಿಭಟನೆ ಶಾಂತಿಯುತವಾಗಿತ್ತು. ಆದರೆ ಲಿಬಿಯಾದ ಸ್ಥಿತಿ ಹಾಗಿಲ್ಲ. ಇಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪಾದಕರು ಎಂದು ಸೈಫ್ ಅಲ್ ಇಸ್ಲಾಮ್ ಆರೋಪಿಸಿದ್ದಾರೆ. ಆದರೆ ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂಬ ಪ್ರಶ್ನೆಗೆ, ಇದು ಸಂಪೂರ್ಣ ಸತ್ಯಕ್ಕೆ ದೂರ ಎಂದು ತಿಳಿಸಿದ್ದಾರೆ.
ನಾವು ನಮ್ಮ ಜನರ ವಿರುದ್ಧ ಹೋರಾಟ ಮಾಡುತ್ತಿಲ್ಲ, ನಮ್ಮ ಹೋರಾಟ ಉಗ್ರರ ವಿರುದ್ಧ ಎಂದು ಇಸ್ಲಾಮ್ ತಿರುಗೇಟು ನೀಡುವ ಮೂಲಕ ತಮ್ಮ ತಂದೆ ಗಡ್ಡಾಫಿ ಅಧ್ಯಕ್ಷಗಿರಿಗೆ ಬೆಂಬಲ ಘೋಷಿಸಿದ್ದಾರೆ.