ಇಸ್ಲಾಮಾಬಾದ್, ಸೋಮವಾರ, 28 ಫೆಬ್ರವರಿ 2011( 16:29 IST )
ಪಾಕಿಸ್ತಾನದ ನೈರುತ್ಯ ಭಾಗದ ಬಲೂಚಿಸ್ತಾನ್ ಪ್ರಾಂತ್ಯದಿಂದ ನಾಲ್ವರು ಹಿರಿಯ ವಕೀಲರನ್ನು ಅಪಹರಿಸಿದ ಬೆನ್ನಲ್ಲೇ ಇಬ್ಬರು ನ್ಯಾಯಾಧೀಶರನ್ನು ಅಪಹರಿಸಿರುವ ಘಟನೆ ನಡೆದಿರುವುದಾಗಿ ವರದಿಯೊಂದು ತಿಳಿಸಿದೆ.
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಾನ್ ಮೊಹಮ್ಮದ್ ಗೋಹಾರ್ ಯಾಸಿನ್‌ಜೈ ಮತ್ತು ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ಅಲಿ ಕಾಕಾರ್ ಅವರು ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ನಾಪತ್ತೆಯಾಗಿರುವುದಾಗಿ ವರದಿ ಹೇಳಿದೆ.
ಇಬ್ಬರೂ ನ್ಯಾಯಾಧೀಶರು ಪೊಲೀಸ್ ರಕ್ಷಣೆಯಲ್ಲಿ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಹರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅವರು ತೆರಳುತ್ತಿದ್ದ ಕಾರು ನಾಸಿರಾಬಾದ್ ಜಿಲ್ಲೆಯಲ್ಲಿ ಪತ್ತೆಯಾಗಿರುವುದಾಗಿ ಹೇಳಿದ್ದಾರೆ.
ಇದೀಗ ನ್ಯಾಯಾಧೀಶರು ಮತ್ತು ಅವರ ಅಂಗರಕ್ಷಕರನ್ನು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಜಾಫ್ರಾಬಾದ್ ಡೆಪ್ಲ್ಯುಟಿ ಕಮಿಷನರ್ ಮೊಹಮ್ಮದ್ ಅಯೂಬ್ ಜಾಫಾರ್ ತಿಳಿಸಿದ್ದಾರೆ.
ಈ ಇಬ್ಬರು ನ್ಯಾಯಾಧೀಶರ ಅಪಹರಣಕ್ಕೂ ಮುನ್ನ ಬಲೂಚಿಸ್ತಾನ ಹೈಕೋರ್ಟ್‌ನ ನಾಲ್ವರು ಹಿರಿಯ ವಕೀಲರನ್ನು ಅಪಹರಿಸಿರುವ ಘಟನೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ವಕೀಲರ ಸಂಘ ಸೋಮವಾರ ಬಲೂಚಿಸ್ತಾನ್ ಕೋರ್ಟ್ ಕಲಾಪವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದು, ವಕೀಲರು ಮತ್ತು ನ್ಯಾಯಾಧೀಶರನ್ನು ಪತ್ತೆ ಹಚ್ಚದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿಯೂ ವಕೀಲರು ಎಚ್ಚರಿಸಿದ್ದಾರೆ.