ಸರ್ವಾಧಿಕಾರಿ ಧೋರಣೆ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ ಹೋರಾಟದ ಕಿಚ್ಚು ವ್ಯಾಪಕವಾಗಿಯೇ ಹಬ್ಬುತ್ತಿದ್ದು ಈಜಿಪ್ಟ್ ಹೊತ್ತಿ ಉರಿದ ನಂತರ ಹೊಸ್ನಿ ಹುದ್ದೆ ಬಿಟ್ಟು ಕೆಳಗಿಳಿದಿದ್ದರು. ಈಗ ಲಿಬಿಯಾದಲ್ಲೂ ಸುಮಾರು 41 ವರ್ಷಗಳಿಂದ ಸರ್ವಾಧಿಕಾರ ಆಡಳಿತ ನಡೆಸುತ್ತಿರುವ ಗಡಾಫಿ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.
ಇದೀಗ ಅಮೆರಿಕ ಲಿಬಿಯಾಗೆ ದಿಗ್ಬಂಧನ ಹೇರಿದ ಬೆನ್ನಲ್ಲೇ ವಿಶ್ವಸಂಸ್ಥೆ ಭದ್ರತಾ ಮಂಡಳಿಯೂ ಸಹ ದಿಗ್ಬಂಧನ ಹೇರಿದೆ. ಈ ಮೂಲಕ ಸರ್ವಾಧಿಕಾರಿ ದಮನಕ್ಕೆ ಸಾಥ್ ನೀಡಿದೆ.
ಶಾಂತಿಯುತ ಬದುಕಿನ ಹಕ್ಕು ಕೇಳುವವರಿಗೆ ಸಾವಿನ ಶಿಕ್ಷೆ ನೀಡುತ್ತಿರುವ ಲಿಬಿಯಾ ದೊರೆಯ ಸರ್ವಾಧಿಕಾರಿ ಧೋರಣೆ ಖಂಡನಾರ್ಹ. ಹೀಗಾಗಿ ಲಿಬಿಯಾದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಹಾಗೂ ಲಿಬಿಯಾ ಜನರ ಹೋರಾಟಕ್ಕೆ ಬೆಂಬಲ ನೀಡುವಲ್ಲಿ ದಿಗ್ಬಂಧನ ಹೇರಲಾಗುವುದು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೋಷಿಸಿದೆ.
ಪಾಕ್ ಕುಮ್ಮಕ್ಕು: ಲಿಬಿಯಾದಲ್ಲಿ ಸರ್ವಾಧಿಕಾರಿ ಧೋರಣೆ ವಿರುದ್ಧ ಹಿಂಸಾಚಾರ ಭುಗಿಲೇಳಲು ಪಾಕ್ ಕುಮ್ಮಕ್ಕು ನೀಡುತ್ತಿದೆ ಎಂದು ಅರಬ್ ಮಾಧ್ಯಮಗಳು ವರದಿ ಮಾಡಿವೆ. ಪಾಕ್ ಮಿಲಿಟರಿ ಲಿಬಿಯಾದಲ್ಲಿನ ಹಿಂಸಾಚಾರಕ್ಕೆ ಸಾಥ್ ನೀಡುತ್ತಿದೆ. ಗಡಾಫಿ ವಿರುದ್ಧ ಸಿಡಿದೇಳುವಂತೆ ಪ್ರೇರೇಪಿಸುತ್ತಿದೆ ಎಂದು ವರದಿ ತಿಳಿಸಿದೆ.
ಈ ವೇಳೆ ಲಿಬಿಯಾದಲ್ಲಿ ಸರ್ವಾಧಿಕಾರಿ ವಿರುದ್ಧ ಹೋರಾಟ ಭುಗಿಲೆದ್ದ ಬೆನ್ನಲ್ಲೇ ಟ್ಯುನಿಸ್‌ನಲ್ಲೂ ಹೋರಾಟ ತೀವ್ರಗೊಂಡಿದ್ದು, ಅಲ್ಲಿನ ನಾಗರಿಕರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.