'ಲಿಬಿಯಾದಲ್ಲಿ ಅಧ್ಯಕ್ಷೀಯ ವ್ಯವಸ್ಥೆ ಇಲ್ಲ. ಅಧಿಕಾರದ ಶಕ್ತಿ ಲಿಬಿಯಾ ಜನರ ಕೈಯಲ್ಲಿಯೇ ಇದೆ' ಎಂದು ಟ್ರೈಪೋಲಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿಕೆ ನೀಡುವ ಮೂಲಕ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ, ತನ್ನ ವಿರುದ್ಧ ಕಳೆದ 15 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ತಣ್ಣಗಾಗಿಸುವ ಯತ್ನಕ್ಕೆ ಮುಂದಾಗಿದ್ದಾರೆ.
ನಿಮಗೆ ಯಾರು ಹೇಳಿದ್ದು, ನಾನು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದೇನೆ ಅಂತ. ಈ ಎಲ್ಲಾ ಸಮಸ್ಯೆಗೆ ವಿದೇಶಿ ಶಕ್ತಿಗಳೇ ಕಾರಣ. ನಿಜಕ್ಕೂ ಲಿಬಿಯಾದ ಅಧಿಕಾರ ಜನರ ಕೈಯಲ್ಲಿಯೇ ಇದೆ. ಹಾಗಾಗಿ ನಾನು ಯಾವುದೇ ಕಾರಣಕ್ಕೂ ಅಧ್ಯಕ್ಷಗಾದಿಯಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು 41 ವರ್ಷಗಳ ಕಾಲದಿಂದ ಲಿಬಿಯಾವನ್ನು ಆಳುತ್ತಿರುವ ಗಡಾಫಿ ಸ್ಪಷ್ಟಪಡಿಸಿದ್ದಾರೆ.
ಲಿಬಿಯಾದಲ್ಲಿ ಯಾವುದೇ ರಾಜನಾಗಲಿ, ಅಧ್ಯಕ್ಷನಾಗಲಿ, ಮುಖಂಡನಾಗಲಿ ಇಲ್ಲ. ಲಿಬಿಯಾದ ಅಧಿಕಾರ ನಡೆಸುತ್ತಿರುವವರು ಜನರೇ. ಹಾಗಾಗಿ ನನ್ನ ಅಧ್ಯಕ್ಷೀಯ ಹುದ್ದೆ ಕೇವಲ ಸಂಕೇತ ಮಾತ್ರ. ನಾನು ಕೇವಲ ಮಾರ್ಗದರ್ಶಕ ಮಾತ್ರ. ಆದರೆ ದೇಶ ಹೇಗೆ ನಡೆಯುತ್ತಿದೆ ಎಂಬುದು ಜಗತ್ತಿಗೆ ಗೊತ್ತಿಲ್ಲ ಎಂದು ಪರೋಕ್ಷವಾಗಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚಿನ ಕೆಲವು ದಿನಗಳಲ್ಲಿ ಮಾಧ್ಯಮಗಳಲ್ಲಿ ನನ್ನ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ನಾನು 1969ರಲ್ಲೇ ಕ್ರಾಂತಿಯನ್ನು ಆರಂಭಿಸಿದ್ದೇನೆ. ಅದೇ ರೀತಿ ಲಿಬಿಯಾವನ್ನು ಸ್ವತಂತ್ರಗೊಳಿಸಿ ಜನರ ಕೈಗೆ ನೀಡಿದ್ದೇನೆ. ಅಷ್ಟೇ ಅಲ್ಲ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಲಾಗಿದೆ ಎಂಬ ವರದಿ ಕೂಡ ಸತ್ಯಕ್ಕೆ ದೂರವಾದದ್ದು ಎಂದು ಗಡಾಫಿ ಸಮಜಾಯಿಷಿ ನೀಡಿದ್ದಾರೆ.
ಅಂತೂ ಕಳೆದ 41 ವರ್ಷಗಳಿಂದ ಲಿಬಿಯಾವನ್ನು ಆಳುತ್ತಿರುವ ಮೊಮ್ಮರ್ ಗಡಾಫಿ ವಿರುದ್ಧ ಜನಾಂದೋಲನ ತೀವ್ರಗೊಳ್ಳುತ್ತಿದ್ದು, ಏತನ್ಮಧ್ಯೆ ಗಡಾಫಿ ನೇತೃತ್ವದ ಮಿಲಿಟರಿ ಪಡೆ ಸಾವಿರಾರು ಮಂದಿಯನ್ನು ಗುಂಡಿಟ್ಟು ಹತ್ಯೆಗೈದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಏನೇ ಆದರೂ ತಾನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಯಲ್ಲ ಎಂದು ಗಡಾಫಿ ಪಟ್ಟು ಹಿಡಿದಿದ್ದಾರೆ.