ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯ್ ನೇತೃತ್ವದ ಸರಕಾರ ತಮ್ಮ ಬೇಡಿಕೆಯನ್ನು ಈಡೇರಿಸದಿರುವುದಕ್ಕೆ ಅಸಮಾಧಾನಗೊಂಡ ಕಾಬೂಲ್ ಗವರ್ನರ್ ರಾಜೀನಾಮೆ ನೀಡಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಝಾಬಿಹುಲ್ಲಾ ಮುಜಾದಾದಿ ಅವರು ಕಾಬೂಲ್ ಪ್ರಾಂತ್ಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಕೇಂದ್ರ ಸರಕಾರ ಸೂಕ್ತವಾದ ರೀತಿಯಲ್ಲಿ ಸಂಪನ್ಮೂಲ ನೀಡುವಲ್ಲಿ ವಿಫಲವಾಗಿರುವುದಾಗಿಯೂ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಕಾಬೂಲ್ ಪ್ರಾಂತ್ಯದ ರಾಜ್ಯಪಾಲರ ಹುದ್ದೆ ಕೇವಲ ಸಾಂಕೇತಿಕವಾದದ್ದು. ಹಾಗಾಗಿ ನಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿಯೇ ಈ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ ಎಂದು ವಾಗ್ದಾನ ಮಾಡಿದ್ದೆ. ಆದರೆ ಈವರೆಗೂ ನನ್ನಿಂದ ಅದು ಸಾಧ್ಯವಾಗಲಿಲ್ಲ ಅದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಮುಜಾದಾದಿ ತಿಳಿಸಿದ್ದಾರೆ.
ಕಾಬೂಲ್ ಪ್ರಾಂತ್ಯಕ್ಕೆ ಕೇವಲ ಸ್ಪಲ್ಪ ಮಟ್ಟಿನ ಸಂಪನ್ಮೂಲವನ್ನು ಮಾತ್ರ ನೀಡಲಾಗಿದೆ. ಕಾಬೂಲ್ ಪ್ರಾಂತ್ಯಕ್ಕೆ ಹೆಚ್ಚಿನ ಬಜೆಟ್ ನೀಡಬೇಕೆಂದು ನಾನು ಸರಕಾರವನ್ನು ಕೇಳಿಕೊಂಡಿದ್ದೆ. ಆದರೆ ಸರಕಾರ ಈವರೆಗೂ ಅದನ್ನು ಈಡೇರಿಸಿಲ್ಲ. ಅದಕ್ಕಾಗಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.