ಕ್ರಿಶ್ಚಿಯನ್ ಸಮುದಾಯದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶಾಹಬಾಜ್ ಭಟ್ಟಿ ಅವರನ್ನು ಕೊಂದ ಹಂತಕರು ಪಾಕಿಸ್ತಾನದ ಶತ್ರುಗಳು ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವ ವ್ಯಕ್ತಿಯನ್ನೇ ಹತ್ಯೆಗೈಯುವುದನ್ನು ಇಸ್ಲಾಮ್ ತೀವ್ರವಾಗಿ ವಿರೋಧಿಸುತ್ತದೆ. ಆ ನಿಟ್ಟಿನಲ್ಲಿ ಭಟ್ಟಿ ಹತ್ಯೆಯ ಹಿಂದಿರುವ ದುಷ್ಟ ಶಕ್ತಿಗಳು ಮಾನವೀಯತೆ ಹಾಗೂ ದೇಶದ ಶತ್ರುಗಳು ಎಂಬುದನ್ನು ತೋರಿಸುತ್ತದೆ ಎಂದು ಕಿಡಿಕಾರಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.
ಸಚಿವ ಶಾಹಬಾದ್ ಭಟ್ಟಿ ಅವರನ್ನು ಮಾರ್ಚ್ 2ರಂದು ಅವರು ಮನೆಯಿಂದ ಕಾರಿನಲ್ಲಿ ಹೊರಟ ಸಂದರ್ಭದಲ್ಲಿ ಗುಂಡಿಟ್ಟು ಹತ್ಯೆಗೈಯಲಾಗಿತ್ತು. ವಿವಾದಿತ ಧಾರ್ಮಿಕ ನಿಂದನಾ ಕಾಯ್ದೆ ಕುರಿತಂತೆ ಕಳೆದ ಎರಡು ತಿಂಗಳಲ್ಲಿ ನಡೆದ ಎರಡನೇ ಹತ್ಯೆ ಇದಾಗಿದೆ. ಇದಕ್ಕೂ ಮುನ್ನ ಜನವರಿ 4ರಂದು ಪಂಜಾಬ್ ಪ್ರಾಂತ್ಯದ ಗವರ್ನರ್ ಸಲ್ಮಾನ್ ತಾಸೀರ್ ಅವರನ್ನು ಅಂಗರಕ್ಷಕನೇ ಗುಂಡಿಟ್ಟು ಕೊಲೆ ಮಾಡಿದ್ದ.
ಸಲ್ಮಾನ್ ಹಾಗೂ ಭಟ್ಟಿ ಧಾರ್ಮಿಕ ನಿಂದನಾ ಕಾಯ್ದೆಯನ್ನು ಬಲವಾಗಿ ವಿರೋಧಿಸಿದ್ದರು. ಹಾಗಾಗಿ ಇಬ್ಬರಿಗೂ ಜೀವ ಬೆದರಿಕೆ ಕರೆಗಳು ಬಂದಿದ್ದವು. ಆದರೆ ಇಸ್ಲಾಮ್‌ನ ತೀವ್ರವಾದಿಗಳು ಅವರನ್ನು ಬಲಿ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂಬ ಆಪಾದನೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಆಸಿಯಾ ಬೀಬಿ ಎಂಬಾಕೆಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಆಕೆಗೆ ಕ್ಷಮಾದಾನ ನೀಡಬೇಕೆಂದು ಕೋರಿ ಇಬ್ಬರೂ ರಾಷ್ಟ್ರಪತಿಗೆ ಮನವಿ ಮಾಡಿಕೊಂಡಿದ್ದರು.