ಕಳೆದ ಎರಡು ವರ್ಷಗಳಿಂದ ಉದ್ಯೋಗವಿಲ್ಲದೆ ತಲೆಚಿಟ್ಟು ಹಿಡಿಸಿಕೊಂಡು ನಿರಾಸೆಗೊಂಡಿದ್ದ ಬ್ರಿಟನ್ ವ್ಯಕ್ತಿಯೊಬ್ಬ ಇದೀಗ ತನ್ನನ್ನು ತಾನೇ ಮಾರಿಕೊಳ್ಳುವುದಾಗಿ ಇ ಬೇ ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಜಾಹೀರಾತನ್ನು ನೀಡಿರುವ ಅಚ್ಚರಿಯ ಘಟನೆಯೊಂದು ನಡೆದಿದೆ.
ಬ್ರಿಸ್ಟಲ್ ನಿವಾಸಿಯಾಗಿರುವ ಡೇವಿಡ್ ವುಡ್ ಟ್ರಾವೆಲ್ಲಿಂಗ್ ಸೇಲ್ಸ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ ಆತ ಕೆಲಸ ಕಳೆದುಕೊಂಡು ಇದೀಗ ಎರಡು ವರ್ಷ ಕಳೆದಿದೆ. ಅಂತೂ ಉದ್ಯೋಗವಿಲ್ಲದೆ ಬೇಸರಗೊಂಡಿದ್ದ ವುಡ್ ಪ್ರತಿದಿನ ಪತ್ರಿಕೆ, ವೆಬ್‌ಸೈಟ್‌ಗಳನ್ನು ಬಿಟ್ಟುಬಿಡದೆ ನೋಡಿ, ಸುಮಾರು 30 ಕೆಲಸಕ್ಕೆ ಅರ್ಜಿ ಗುಜರಾಯಿಸಿದ್ದ. ಆದರೆ ಎಲ್ಲಿಯೂ ಕೆಲಸ ದಕ್ಕಲಿಲ್ಲವಾಗಿತ್ತು ಎಂದು ಮಾಧ್ಯಮದ ವರದಿಯೊಂದು ವಿವರಿಸಿದೆ.
ಅಷ್ಟೇ ಅಲ್ಲ ತನ್ನ ಕೈತಪ್ಪಿ ಹೋಗಲಿರುವ ಮನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಡೇವಿಡ್ ತಂದೆಯಲ್ಲಿ ಸಾಲವನ್ನು ಕೇಳಿದ್ದ. ಆದರೆ ತಂದೆಯೂ ಸಹಕರಿಸಲಿಲ್ಲ ಎಂದು ಡೈಲಿ ಮೇಲ್ ವರದಿ ತಿಳಿಸಿದೆ.
ಒಂದೆಡೆ ಉದ್ಯೋಗವೂ ಇಲ್ಲ, ಯಾರಿಂದಲೂ ಸಹಾಯವೂ ಸಿಗುತ್ತಿಲ್ಲ. ಇದರಿಂದಾಗಿ ನಿರಾಸೆಗೊಂಡ ಡೇವಿಡ್ ಕಳೆದ ತಿಂಗಳು ಆತ್ಮಹತ್ಯೆಗೆ ಯತ್ನಿಸಿ ವಿಫಲನಾದ ನಂತರ ಹೊಳೆದ ಐಡಿಯಾ...ತನ್ನನ್ನು ತಾನು ಮಾರಿಕೊಳ್ಳುವುದು! ಅದರಂತೆ ಇ ಬೇ ವೆಬ್‌ಸೈಟ್‌ನಲ್ಲಿ, 'ಅನುಭವಿ ಸೇಲ್ಸ್ ರೆಪ್ರೆಸೆಂಟೇಟಿವ್ ಮಾರಾಟಕ್ಕಿದ್ದಾರೆ' ಎಂದು ಜಾಹೀರಾತು ಕೊಟ್ಟಿದ್ದಾನೆ.
1965ರಲ್ಲಿ ಜನಿಸಿರುವ ತಾನು ಉತ್ಸಾಹಿ ಹಾಗೂ ಅನುಭವಿಯಾಗಿದ್ದು, ತಾನು ಮಾರಾಟಕ್ಕಿದ್ದೇನೆ ಎಂದು ಡೇವಿಡ್ ತಾವು ನೀಡಿರುವ ಜಾಹೀರಾತಿನಲ್ಲಿ ಉಲ್ಲೇಖಿಸಿದ್ದಾರೆ.