ತಾಲಿಬಾನ್ ಉಗ್ರರು ಮತ್ತೆ ತಮ್ಮ ಅಟ್ಟಹಾಸ ಮುಂದುವರಿಸಿದ್ದು, ಇಲ್ಲಿನ ವಾಯುವ್ಯ ಪ್ರದೇಶದಲ್ಲಿನ ಹೆಣ್ಮಕ್ಕಳ ಸರಕಾರಿ ಶಾಲೆಯೊಂದನ್ನು ಬಾಂಬ್ ಇಟ್ಟು ಧ್ವಂಸಗೊಳಿಸಿರುವ ಘಟನೆ ಶನಿವಾರ ನಡೆದಿದೆ.
ಖೈಬೆರ್ ಪಾಕ್ತುನ್‌ಖಾವಾ ಪ್ರಾಂತ್ಯದಲ್ಲಿನ ಸ್ವಾಬಿ ಜಿಲ್ಲೆಯ ಕಾಲೋ ಬಾಂಡಾ ಶ್ವಾನ್ ಎಂಬಲ್ಲಿನ ಹೆಣ್ಮಕ್ಕಳ ಪ್ರಾಥಮಿಕ ಶಾಲೆಯನ್ನು ಬಾಂಬ್ ಇಟ್ಟು ಸ್ಫೋಟಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಾಂತ್ಯದಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದಕ್ಕೆ ತಾಲಿಬಾನ್ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು, ಈಗಾಗಲೇ ನೂರಾರು ಶಾಲೆಗಳನ್ನು ಧ್ವಂಸಗೊಳಿಸಿತ್ತು.
ತಾಲಿಬಾನ್ ಉಗ್ರರ ಕೆಂಗಣ್ಣಿಗೆ ಕಳೆದ ಮೂರು ವರ್ಷಗಳಲ್ಲಿ ಹೆಣ್ಮಕ್ಕಳ ಹಲವು ಶಾಲೆಗಳು ಧ್ವಂಸಗೊಂಡಿವೆ. ಇದರಿಂದಾಗಿ ಇಲ್ಲಿನ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸವೇ ಇಲ್ಲದಂತಾಗಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.