ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ವಿರುದ್ಧ ಪಾಕಿಸ್ತಾನ ಕೋರ್ಟ್ ಮೂರನೇ ಬಾರಿ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದು, ಎರಡು ವಾರದೊಳಗೆ ಮುಷ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಟರ್ಸ್‌ಗೆ ತಾಕೀತು ಮಾಡಿದೆ.
ಭುಟ್ಟೋ ಹತ್ಯಾ ಪ್ರಕರಣದ ಶಂಕಿತ ಐವರ ವಿರುದ್ಧ ವಿಚಾರಣೆ ನಡೆಸಿದ ನ್ಯಾಯಾಧೀಶ ರಾಣಾ ನಿಸಾರ್ ಅಹ್ಮದ್ ಅವರು ಈ ರೀತಿ ಆದೇಶ ನೀಡಿದ್ದಾರೆ. ಮುಷರ್ರಫ್ ವಿರುದ್ಧ ಫೆಬ್ರುವರಿ 12ರಂದು ಮೊದಲ ಬಾರಿ ವಾರಂಟ್ ಜಾರಿ ಮಾಡಿತ್ತು.
ಮುಷರ್ರಫ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಪ್ರಾಸಿಕ್ಯೂಟರ್ಸ್ ಮನವಿಗೆ, ಕೇವಲ ಎರಡು ವಾರಗಳೊಳಗೆ ಹಾಜರುಪಡಿಸುವಂತೆ ಹೇಳಿ ಮೂರನೇ ಬಾರಿ ಜಾಮೀನು ರಹಿತ ವಾರಂಟ್ ಹೊರಡಿಸಿದರು.
ಬೆನಜೀರ್ ಹತ್ಯೆ ಪ್ರಕರಣದಲ್ಲಿ ಮುಷರ್ರಫ್ ಅವರು ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ ಎಂದು ತನಿಖಾಧಿಕಾರಿಗಳು ವಿಚಾರಣೆ ವೇಳೆ ನ್ಯಾಯಾಧೀಶರಲ್ಲಿ ಹೇಳಿದಾಗ ವಾರಂಟ್ ಜಾರಿಗೊಳಿಸಿದ್ದರು.