ಸುಮಾರು 42 ವರ್ಷಗಳ ಕಾಲದಿಂದ ಲಿಬಿಯಾವನ್ನು ಆಳುತ್ತಿರುವ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ಕೊನೆಗೂ ಕರಾರಿನೊಂದಿಗೆ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ ಎಂದು ಅರಬ್‌ನ ಪ್ರಮುಖ ಎರಡು ಮಾಧ್ಯಮ ವರದಿ ಮತ್ತು ಅಲ್ ಜಾಜೀರಾ ಟೆಲಿವಿಷನ್ ತಿಳಿಸಿದೆ. ಆದರೆ ಈ ಕುರಿತು ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಂದಿಲ್ಲ.
'ಖಚಿತ ಖಾತ್ರಿಯ ಮೇಲೆ ಅಧಿಕಾರದಿಂದ ಕೆಳಗಿಳಿಯುವ ಕುರಿತು ಲಿಬಿಯಾ ಬಂಡುಕೋರರ ಜೊತೆ ಸಂಸತ್‌ನಲ್ಲಿ ಮಾತುಕತೆ ನಡೆಸುವ ಪ್ರಸ್ತಾಪವನ್ನು' ಗಡಾಫಿ ಮುಂದಿಟ್ಟಿದ್ದಾರೆಂದು ಅಲ್ ಜಾಜೀರಾ ತಿಳಿಸಿದೆ.
ಗಡಾಫಿ ತನ್ನ ಆಂತರಿಕ ಕೌನ್ಸಿಲ್‌ನಲ್ಲಿ ಈ ಪ್ರಸ್ತಾಪ ಮುಂದಿಟ್ಟಿದ್ದು, ದೇಶದ ಪೂರ್ವ ಭಾಗದ ಪ್ರದೇಶಗಳು ವಿರೋಧಿಗಳ ಹಿಡಿತಕ್ಕೆ ಸೇರಿದ ನಂತರ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆಂದು ವರದಿ ವಿವರಿಸಿದೆ. ತನ್ನ ವೈಯಕ್ತಿಕ ರಕ್ಷಣೆ ಹಾಗೂ ಕುಟುಂಬದ ರಕ್ಷಣೆ ಸೇರಿದಂತೆ ಕೆಲವೊಂದು ಷರತ್ತುಗಳನ್ನು ಪೂರೈಸುವ ಬಗ್ಗೆ ಒಪ್ಪಂದ ಮಾಡಿಕೊಂಡು ತಾವು ಅಧಿಕಾರದಿಂದ ಕೆಳಗಿಳಿಯುವುದಾಗಿ ಅವರು ಹೇಳಿದ್ದಾರೆಂದು ಮೂಲವೊಂದು ಹೇಳಿದೆ ಎಂದು ವರದಿ ವಿವರಿಸಿದೆ.
ಮೊಮ್ಮರ್ ಗಡಾಫಿ ಅಧಿಕಾರ ತ್ಯಜಿಸುವ ಕುರಿತು ಒಪ್ಪಂದದ ಬಗ್ಗೆ ಎದುರು ನೋಡುತ್ತಿದ್ದಾರೆಂದು ಲಂಡನ್ ಮೂಲದ ದೈನಿಕ ಅಲ್ ಅವ್‌ಸಾಟ್ ಮತ್ತು ಯುಎಇ ಮೂಲದ ಅಲ್ ಬೇಯಾನ್ ಪತ್ರಿಕೆಗಳು ಕೂಡ ಬಲ್ಲ ಮೂಲಗಳು ಹೇಳಿರುವುದಾಗಿ ವರದಿ ಮಾಡಿವೆ.