ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಬ್ದುಲ್ ಜಲೀಲ್‌ನನ್ನ ಸೆರೆಹಿಡಿದವರಿಗೆ ಬಹುಮಾನ: ಗಡಾಫಿ (Muammar Gaddafi | Libya | bounty offers | Mustafa Abdul-Jalil | protests)
ಅಬ್ದುಲ್ ಜಲೀಲ್‌ನನ್ನ ಸೆರೆಹಿಡಿದವರಿಗೆ ಬಹುಮಾನ: ಗಡಾಫಿ
ಮಾಸ್ಕೊ, ಗುರುವಾರ, 10 ಮಾರ್ಚ್ 2011( 15:08 IST )
ಕಳೆದ 41 ವರ್ಷದಿಂದ ಲಿಬಿಯಾವನ್ನು ಆಳುತ್ತಿರುವ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ವಿರುದ್ಧ ಜನರು ತಿರುಗಿಬಿದ್ದಿದ್ದು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಏತನ್ಮಧ್ಯೆ ದೇಶದ ವಿರೋಧ ಪಕ್ಷದ ಪ್ರಮುಖ ಮುಖಂಡನನ್ನು ಸೆರೆ ಹಿಡಿದು ಕೊಟ್ಟವರಿಗೆ 400,000 ಡಾಲರ್ ಬುಹುಮಾನ ಕೊಡುವುದಾಗಿ ಗಡಾಫಿ ಘೋಷಿಸಿದ್ದಾರೆ.
ಗಡಾಫಿಯ ಈ ಘೋಷಣೆಯನ್ನು ಲಿಬಿಯಾ ಟಿವಿ ಚಾನೆಲ್ ಪ್ರಸಾರ ಮಾಡಿದ್ದು, ಲಿಬಿಯಾದ ಮಾಜಿ ಜಸ್ಟೀಸ್ ಸಚಿವ ಮುಸ್ತಾಫಾ ಅಬ್ದುಲ್ ಜಲೀಲ್ ಅವರನ್ನು ಸೆರೆ ಹಿಡಿದು ಕೊಟ್ಟವರಿಗೆ ಬೃಹತ್ ಮೊತ್ತದ ಬಹುಮಾನ ನೀಡುವ ಆಮಿಷ ಒಡ್ಡಿದ್ದಾರೆ.
ಯಾರೇ ಆಗಲಿ ಜಲೀಲ್ ಅವರನ್ನು ಸೆರೆಹಿಡಿದು ತಮಗೊಪ್ಪಿಸಿದಲ್ಲಿ ಅವರಿಗೆ 400,000 ಡಾಲರ್ ನೀಡುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ.
ಟ್ಯುನಿಷಿಯಾ ಮತ್ತು ಈಜಿಪ್ಟ್‌ನಲ್ಲಿನ ಸರ್ವಾಧಿಕಾರಿಗಳ ವಿರುದ್ಧ ಜನರು ತಿರುಗಿಬಿದ್ದು ಪ್ರತಿಭಟನೆ ನಡೆಸಿದ ಪರಿಣಾಮ ಎರಡೂ ದೇಶಗಳ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಏತನ್ಮಧ್ಯೆ ಈಜಿಪ್ಟ್, ಟ್ಯುನಿಷಿಯಾ ಪ್ರತಿಭಟನೆಯಿಂದ ಪ್ರಭಾವಿತರಾಗಿರುವ ಲಿಬಿಯಾ ಜನರು ಕೂಡ ಸರ್ವಾಧಿಕಾರಿ ಮುಮ್ಮರ್ ಗಡಾಫಿ ಅಧ್ಯಕ್ಷಗಾದಿಯಿಂದ ಕೆಳಗಿಳಿಯುವಂತೆ ತೀವ್ರ ಹೋರಾಟ ನಡೆಸುತ್ತಿದ್ದಾರೆ.
ಫೆಬ್ರುವರಿ 14ರಂದು ಆರಂಭಗೊಂಡ ಗಡಾಫಿ ವಿರೋಧಿ ಪ್ರತಿಭಟನೆಯಲ್ಲಿ ಸುಮಾರು ಆರು ಸಾವಿರ ಮಂದಿ ಸಾವನ್ನಪ್ಪಿರುವುದಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಅಂದಾಜಿಸಿದೆ.
ದೇಶದೊಳಗೆ ಅಲ್ ಖಾಯಿದಾ ಭಯೋತ್ಪಾದಕ ಸಂಘಟನೆಗಳ ಜಾಲ ಹಬ್ಬಿದ್ದು, ಅವುಗಳ ಕೈವಾಡದಿಂದಾಗಿಯೇ ಲಿಬಿಯಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಗಡಾಫಿ ಬುಧವಾರ ಸಂದರ್ಶನವೊಂದರಲ್ಲಿ ಆರೋಪಿಸಿ, ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸುವಂತೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರು.