ಲಿಬಿಯಾಕ್ಕೆ ಎಲ್ಲಾ ರೀತಿಯ ಶಸ್ತ್ರಾಸ್ತ್ರ ಮಾರಾಟವನ್ನು ನಿಷೇಧಿಸಿರುವುದಾಗಿ ರಷ್ಯಾ ಗುರುವಾರ ಘೋಷಿಸಿದ್ದು, ಅಧ್ಯಕ್ಷ ಮೊಮ್ಮರ್ ಗಡಾಫಿ ನೇತೃತ್ವದ ಸರಕಾರದ ಜೊತೆ ಮಾಡಿಕೊಂಡಿದ್ದ ಬಿಲಿಯನ್ ಡಾಲರ್‌ನಷ್ಟು ಶಸ್ತ್ರಾಸ್ತ್ರ ಮಾರಾಟ ಒಪ್ಪಂದ ರದ್ದುಮಾಡಿರುವುದಾಗಿ ಕ್ರೆಮ್ಲಿನ್ ಪ್ರಕಟಣೆಯಲ್ಲಿ ತಿಳಿಸಿದೆ.
41 ವರ್ಷಗಳ ಕಾಲದಿಂದ ಲಿಬಿಯಾದ ಅಧ್ಯಕ್ಷಗಾದಿಯಲ್ಲಿರುವ ಗಡಾಫಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಏತನ್ಮಧ್ಯೆ ಗಡಾಫಿ ತಾನು ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.
ಅಲ್ಲದೇ ವಿಶ್ವಸಂಸ್ಥೆ, ಅಮೆರಿಕ ಕೂಡ ಗಡಾಫಿ ಪದತ್ಯಾಗಕ್ಕೆ ಎಚ್ಚರಿಕೆಯನ್ನೂ ನೀಡಿದೆ. ಆದರೆ ಲಿಬಿಯಾದಲ್ಲಿನ ಸಂಘರ್ಷ ಹತ್ತಿಕ್ಕಲು ಮಿಲಿಟರಿ ಕಾರ್ಯಾಚರಣೆ ನಡೆಸುವ ಅಮೆರಿಕದ ನಿರ್ಧಾರಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ಮಿಲಿಟರಿ ಕಾರ್ಯಾಚರಣೆ ಸಮಸ್ಯೆಗೆ ಪರಿಹಾರ ಆಗಲ್ಲ ಎಂದು ತಿಳಿಸಿದೆ.
ಅಮೆರಿಕದ ನಂತರ ರಷ್ಯಾ ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ರೀತಿ ರಷ್ಯಾ ಲಿಬಿಯಾಕ್ಕೆ ಶಸ್ತ್ರಾಸ್ತ್ರ ಮಾರಾಟ ಮಾಡುವ ಪ್ರಮುಖ ದೇಶವಾಗಿದೆ. ಆ ನಿಟ್ಟಿನಲ್ಲಿ ಲಿಬಿಯಾಕ್ಕೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಮಾರಾಟ ಮಾಡಬಾರದು ಎಂಬ ನಿಷೇಧದ ನಿರ್ಧಾರಕ್ಕೆ ರಷ್ಯಾ ಅಧ್ಯಕ್ಷ ಡೆಮಿಟ್ರಿ ಮೆಡ್ವೆಡೇವ್ ಅಂಕಿತ ಹಾಕಿದ್ದಾರೆ.