ಲಿಬಿಯಾದ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ಪದತ್ಯಾಗ ಮಾಡುವಂತೆ ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳು ಹೆಚ್ಚಿನ ಒತ್ತಡ ಹಾಕುತ್ತಿದ್ದು, ಮತ್ತೊಂದೆಡೆ ಗಡಾಫಿ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಮಿಲಿಟರಿ ಪಡೆ ಹರಸಾಹಸ ಪಡುತ್ತಿದೆ.
ಗಡಾಫಿ ಅಧ್ಯಕ್ಷಗಾದಿಯಿಂದ ಕೆಳಗಿಳಿಯಲು ಎಲ್ಲಾ ರೀತಿಯ ಅವಕಾಶಗಳನ್ನು ನೀಡಲು ಶುಕ್ರವಾರ ಬ್ರುಸ್ಸೆಲ್ಸ್‌ನಲ್ಲಿ ಯುರೋಪಿಯನ್ ಒಕ್ಕೂಟದ ಮುಖಂಡರು ನಡೆಸಿದ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಆದರೆ ಪ್ರತಿಭಟನಾಕಾರರ ವಿರುದ್ಧ ನಡೆಸುತ್ತಿರುವ ವಿಮಾನ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ತಾಕೀತು ಮಾಡಿದೆ.
ಲಿಬಿಯಾದ ಮೇಲೆ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ನಿರ್ಬಂಧಗಳನ್ನು ಹೇರಲಾಗಿದೆ. ರಷ್ಯಾ, ಅಮೆರಿಕ, ವಿಶ್ವಸಂಸ್ಥೆ ಈಗಾಗಲೇ ಆ ನಿಟ್ಟಿನಲ್ಲಿ ತಮ್ಮ ನಿಷೇಧವನ್ನು ಹೇರಿವೆ. ಆದರೂ ಗಡಾಫಿ ಯಾವುದನ್ನೂ ಲೆಕ್ಕಿಸದೆ ಮುಂದುವರಿಯುತ್ತಿರುವ ಬಗ್ಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ನಾವು ನಿಧಾನವಾಗಿ ಗಡಾಫಿ ವಿರುದ್ಧದ ಮೂಗುದಾರವನ್ನು ಬಿಗಿಗೊಳಿಸುತ್ತಿದ್ದೇವೆ. ಹಾಗಾಗಿ ಗಡಾಫಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರತ್ಯೇಕವಾಗಿದ್ದಾರೆ ಎಂದಿರುವ ಬರಾಕ್, ಆ ನಿಟ್ಟಿನಲ್ಲಿ ನಾನು ಕಾನೂನು ಬಾಹಿರವಾಗಿ ಯಾವುದೇ ಕ್ರಮ ಕೈಗೊಳ್ಳಲಾರೆ ಎಂದು ತಿಳಿಸಿದ್ದಾರೆ.