ಜಪಾನ್ ಸುನಾಮಿ ಕಾರ್ಟೂನ್; ಕ್ಷಮೆಯಾಚಿಸಿದ ಮಲೇಷ್ಯಾ ಪತ್ರಿಕೆ
ಕೌಲಾಲಂಪುರ, ಸೋಮವಾರ, 14 ಮಾರ್ಚ್ 2011( 16:36 IST )
PTI
ಜಪಾನ್‌ನಲ್ಲಿ ಸಂಭವಿಸಿದ ಭೀಕರ ಸುನಾಮಿ ಘಟನೆಯನ್ನು ಅಣಕಿಸುವ ರೀತಿಯಲ್ಲಿ ಕಾರ್ಟೂನ್ ಪ್ರಕಟಿಸಿದ ಮಲೇಷ್ಯಾದ ದೈನಿಕವೊಂದು ತೀವ್ರ ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸೋಮವಾರ ಕ್ಷಮೆಯಾಚಿಸಿದೆ.
ಜಪಾನ್ ರಾಜಧಾನಿ ಟೋಕಿಯೋದ ಉತ್ತರ ಭಾಗದಲ್ಲಿ ಸಂಭವಿಸಿದ ಭಾರೀ ಭೂಕಂಪ ಹಾಗೂ ಸುನಾಮಿ ರುದ್ರತಾಂಡವದಿಂದ ಸಾವಿರಾರು ಮಂದಿ ಸಾವನ್ನಪ್ಪಿ, ಸಾವಿರಾರು ಮನೆಗಳು, ಹಳ್ಳಿಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು.
'ರಕ್ಕಸಗಾತ್ರದ ಅಲೆ ಎದ್ದುಬರುತ್ತಿರುವ ಹಾಗೂ ಅದರ ಮುಂದೆ ಜಪಾನಿ ವೇಷಭೂಷಣ ತೊಟ್ಟ ವ್ಯಕ್ತಿ ಜೀವಭಯದಿಂದ ಓಡುತ್ತಿರುವ ಕಾರ್ಟೂನ್' ಮಲಯ ಭಾಷೆಯ ಬೆರಿಟಾ ಹಾರಿಯನ್ ದೈನಿಕದಲ್ಲಿ ಭಾನುವಾರ ಪ್ರಕಟವಾಗಿತ್ತು. ಈ ಸಂಚಿಕೆ ಮಾರುಕಟ್ಟೆಗೆ ಬಂದ ಕೂಡಲೇ ಎಲ್ಲೆಡೆ ಪ್ರತಿಭಟನೆ ನಡೆದಿದ್ದು, ಘೋರ ದುರಂತವನ್ನು ಅಣಕಿಸುವ ರೀತಿಯಲ್ಲಿ ಕಾರ್ಟೂನ್ ಪ್ರಕಟಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಭಟನಾಕಾರರು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದರು.
ಅದರಂತೆ ಕೊನೆಗೂ ಬೆರಿಟಾ ಹಾರಿಯನ್ ಸೋಮವಾರದ ಪತ್ರಿಕೆಯ ಮುಖಪುಟದಲ್ಲಿ ಕ್ಷಮೆಯಾಚಿಸಿದೆ. 'ಜಪಾನ್‌ನಲ್ಲಿ ಶುಕ್ರವಾರ ಸಂಭವಿಸಿದ ದುರಂತವನ್ನು ತಮಾಷೆ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲವಾಗಿತ್ತು' ಎಂದು ಪತ್ರಿಕೆ ತಿಳಿಸಿದೆ. ಜಪಾನ್‌ನಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ಸಾವಿರಾರು ಕುಟುಂಬಗಳು ಜೀವ ಕಳೆದುಕೊಂಡಿವೆ. ಆದರೆ ಕಾರ್ಟೂನ್ ಪ್ರಕಟಿಸಿರುವುದಕ್ಕೆ ವ್ಯಂಗ್ಯಚಿತ್ರಕಾರ ಕೂಡ ಕ್ಷಮೆಯಾಚಿಸಿದ್ದು, ದುರಂತದಲ್ಲಿ ಮಡಿದವರಿಗೆ ಸಾಂತ್ವಾನ ಹೇಳುವುದಾಗಿ ತಿಳಿಸಿರುವ ಪತ್ರಿಕೆ ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆಯಾಚಿಸುವುದಾಗಿ ಹೇಳಿ ವಿವಾದಕ್ಕೆ ತೆರೆ ಎಳೆದಿದೆ.