ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್: ಪತ್ನಿ,ಮಕ್ಕಳಿಗೆ ಬೆಂಕಿ ಹಚ್ಚಿ...ಸಾವಿಗೆ ಶರಣಾದ ಪತಿ! (Pakistan | man burns family | murdered | Police | honour killing,)
ಪಾಕ್: ಪತ್ನಿ,ಮಕ್ಕಳಿಗೆ ಬೆಂಕಿ ಹಚ್ಚಿ...ಸಾವಿಗೆ ಶರಣಾದ ಪತಿ!
ಇಸ್ಲಾಮಾಬಾದ್, ಮಂಗಳವಾರ, 15 ಮಾರ್ಚ್ 2011( 17:26 IST )
ತನ್ನ ಎರಡನೇ ಪತ್ನಿ, ನಾಲ್ಕು ಮಕ್ಕಳನ್ನು ಬೆಂಕಿ ಹಚ್ಚಿ ಸುಟ್ಟ ನಂತರ ತಾನು ಸಾವಿಗೆ ಶರಣಾಗಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾರ್ಯಾವಾಲಾ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಇದು ಗೌರವ ಹತ್ಯೆ ಇರಬೇಕೆಂದು ಪೊಲೀಸರು ಶಂಕಿಸಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಶೌಕತ್ ಅಲಿ ಭಾನುವಾರ ರಾತ್ರಿ ತನ್ನ ಗರ್ಭಿಣಿ ಪತ್ನಿ ಪ್ರವೀಣ್ ಬೀಬಿ, ಮಕ್ಕಳಾದ ಫಾತಿಮಾ (9), ಮಿಸ್ಬಾ (6), ಮುನಿರ್ (3) ಹಾಗೂ ನಯೀಮ್ (18 ತಿಂಗಳು) ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ನಂತರ ತಾನು ಬೆಂಕಿಹಚ್ಚಿಕೊಂಡು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸುಮಾರು 15 ವರ್ಷಗಳ ಹಿಂದೆ ಅಲಿ ತನ್ನ ಮಲ ತಾಯಿ ಕಾನ್‌ಜೀಮ್ ಅವರನ್ನು ಹತ್ಯೆಗೈದಿದ್ದ. ತದನಂತರ ಏಳು ವರ್ಷಗಳ ನಂತರ ತನ್ನ ಮೊದಲ ಪತ್ನಿ ಉಜ್ಮಾಳಿಗೆ ವಿಷ ನೀಡಿ ಹತ್ಯೆಗೈದಿರುವುದಾಗಿ ಪೊಲೀಸರು ವಿವರಿಸಿದ್ದಾರೆ.
ಬೆಂಕಿಯಲ್ಲಿ ಸುಟ್ಟು ಕರಕಲಾದ ಅಲಿ, ಪತ್ನಿ ಹಾಗೂ ನಾಲ್ಕು ಮಕ್ಕಳ ಮೃತದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಆತನ ಸಂಬಂಧಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆಂದು ವರದಿ ಹೇಳಿದೆ. ಆದರೂ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾಶ್‌ಮತ್ ಕಾಮಲ್ ತಿಳಿಸಿದ್ದಾರೆ.