ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪ್ರತಿಭಟನೆ: ಬಹರೈನ್‌ನಲ್ಲಿ ತುರ್ತುಪರಿಸ್ಥಿತಿ ಘೋಷಣೆ (emergency declared | Bahrain | monarchy | political unrest | threatening)
ಪ್ರತಿಭಟನೆ: ಬಹರೈನ್‌ನಲ್ಲಿ ತುರ್ತುಪರಿಸ್ಥಿತಿ ಘೋಷಣೆ
ಮನಾಮಾ, ಬುಧವಾರ, 16 ಮಾರ್ಚ್ 2011( 09:34 IST )
ದೇಶದಲ್ಲಿನ ರಾಜಪ್ರಭುತ್ವದ ವಿರುದ್ಧ ಭುಗಿಲೆದ್ದಿರುವ ಪ್ರತಿಭಟನೆಯನ್ನು ದಮನಗೊಳಿಸುವ ನಿಟ್ಟಿನಲ್ಲಿ ಬಹರೈನ್‌ನಲ್ಲಿ ಮೂರು ತಿಂಗಳ ಕಾಲ ತುರ್ತುಪರಿಸ್ಥಿತಿ ಘೋಷಿಸಲಾಗಿದೆ ಎಂದು ಬಹರೈನ್ ಟಿವಿ ಮಾಧ್ಯಮಗಳ ವರದಿ ತಿಳಿಸಿದೆ.
ಈಜಿಪ್ಟ್, ಟ್ಯುನಿಶಿಯಾದಲ್ಲಿ ಸರ್ವಾಧಿಕಾರಿ ಅಧ್ಯಕ್ಷರ ವಿರುದ್ಧ ಬೃಹತ್ ಚಳವಳಿ ನಡೆಯುವ ಮೂಲಕ ತಮ್ಮ ಗದ್ದುಗೆಯಿಂದ ಕೆಳಗಿಳಿದಿದ್ದರು. ಬಳಿಕ ಲಿಬಿಯಾದಲ್ಲಿ ಗಡಾಫಿ ಅಧ್ಯಕ್ಷ ಪಟ್ಟ ತ್ಯಜಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ, ಕಳೆದ ಒಂದು ತಿಂಗಳಿನಿಂದ ಬಹರೈನ್‌ನಲ್ಲಿನ ರಾಜಪ್ರಭುತ್ವದ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ.
ಆ ನಿಟ್ಟಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಮಟ್ಟಹಾಕಲು ಬಹರೈನ್ ಮಿಲಿಟರಿ ಪಡೆಯ ಮುಖ್ಯಸ್ಥರಿಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಬಹರೈನ್ ರಾಜ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಪ್ರತಿಭಟನೆಯ ಕಾವು ತೀವ್ರಗೊಂಡಿದ್ದು ಅಂಗಡಿ-ಮುಂಗಟ್ಟು ಮುಚ್ಚಿದ್ದವು. ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಏತನ್ಮಧ್ಯೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಬಹರೈನ್ ಎಲ್ಲಾ ರೀತಿಯ ತಂತ್ರಗಳನ್ನು ಅನುಸರಿಸುತ್ತಿದೆ.