ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಲಿಬಿಯಾ: ನ್ಯೂಯಾರ್ಕ್ ಟೈಮ್ಸ್‌ನ ನಾಲ್ವರು ಪತ್ರಕರ್ತರು ಕಣ್ಮರೆ (New York Times | journalists missing | Libya | Gaddafi | America)
ಲಿಬಿಯಾ: ನ್ಯೂಯಾರ್ಕ್ ಟೈಮ್ಸ್‌ನ ನಾಲ್ವರು ಪತ್ರಕರ್ತರು ಕಣ್ಮರೆ
ವಾಷಿಂಗ್ಟನ್, ಗುರುವಾರ, 17 ಮಾರ್ಚ್ 2011( 15:55 IST )
ಪತ್ರಿಕೋದ್ಯಮದ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ವರದಿಗಾರ ಸೇರಿದಂತೆ ದಿ ನ್ಯೂಯಾರ್ಕ್ ಟೈಮ್ಸ್‌ನ ನಾಲ್ಕು ಮಂದಿ ಪತ್ರಕರ್ತರು ಪೂರ್ವ ಲಿಬಿಯಾದಲ್ಲಿ ನಾಪತ್ತೆಯಾಗಿದ್ದಾರೆ.
ಲಿಬಿಯಾ ಸರ್ವಾಧಿಕಾರಿ ಮೊಮ್ಮರ್ ಗಡಾಫಿ ಮಿಲಿಟರಿ ಪಡೆ ವಿರುದ್ಧ ಬಂಡುಕೋರರು ತೀವ್ರ ಹೋರಾಟ ಮಾಡುತ್ತಿದ್ದು, ಇಲ್ಲಿನ ವಿದ್ಯಮಾನಗಳನ್ನು ವರದಿ ಮಾಡಲು ತೆರಳಿದ್ದ ನಾಲ್ವರು ಪತ್ರಕರ್ತರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಪಾಶ್ಚಾತ್ಯ ದೇಶದ ಪತ್ರಕರ್ತರನ್ನು ಹಿಂಸೆಗೆ ಗುರಿಪಡಿಸುವುದಾಗಲಿ ಅಥವಾ ಬಂಧಿಸುವುದಾಗಲಿ ಮಾಡಿದರೆ ಹುಷಾರ್ ಎಂದು ಶ್ವೇತಭವನ ಈಗಾಗಲೇ ಲಿಬಿಯಾಕ್ಕೆ ಎಚ್ಚರಿಕೆ ನೀಡಿತ್ತು. ಅಲ್ಲದೆ, ಬ್ರಿಟನ್‌ನ ಗಾರ್ಡಿಯನ್ ಪತ್ರಿಕೆಯ ವರದಿಗಾರರನ್ನು ಬಂಧಿಸಿದ್ದು ನಂತರ ಬಿಡುಗಡೆ ಮಾಡಿರುವುದಾಗಿ ಹೇಳಿದೆ.
ನ್ಯೂಯಾರ್ಕ್ ಟೈಮ್ಸ್‌ನ ಹಿರಿಯ ಅನುಭವಿ ನಾಲ್ವರು ವರದಿಗಾರರ ಜತೆ ಮಂಗಳವಾರ ಬೆಳಿಗ್ಗೆ ಅಂತಿಮ ಬಾರಿಗೆ ಸಂಪರ್ಕಿಸಿ ಮಾತನಾಡಿರುವುದಾಗಿ ಪತ್ರಿಕೆಯ ಸಂಪಾದಕರು ತಿಳಿಸಿದ್ದಾರೆ. ಈ ಬಗ್ಗೆ ಲಿಬಿಯಾ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಿದಾಗಲು ಸಮರ್ಪಕ ಉತ್ತರ ನೀಡಿಲ್ಲ ಎಂದು ಟೈಮ್ಸ್ ಸಂಪಾದಕ ಬಿಲ್ ಕೆಲ್ಲೆರ್ ಹೇಳಿದ್ದಾರೆ.