ಲಾಹೋರ್‌ನಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಹತ್ಯೆಗೈದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ಅಮೆರಿಕದ ಸಿಐಎ ಗುತ್ತಿಗೆದಾರ ರೇಮಂಡ್ ಡೇವಿಸ್ ಅವರನ್ನು ನ್ಯಾಯಾಲಯ ಬಂಧಮುಕ್ತಗೊಳಿಸಿದೆ. ಆದರೆ ಇದರ ಹಿಂದೆ ಪಾಕಿಸ್ತಾನಿ ಇಂಟೆಲಿಜೆನ್ಸ್ ಏಜೆನ್ಸಿ ಐಎಸ್ಐ ಮತ್ತು ಅಮೆರಿಕದ ಸಿಐಎ ನಡುವೆ 'ಬೃಹತ್ ಡೀಲ್' ನಡೆದಿದೆ ಎಂದು ಮಾಧ್ಯಮದ ವರದಿಯೊಂದು ತಿಳಿಸಿದೆ.
ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಕುಟುಂಬಕ್ಕೆ ಡೇವಿಸ್ ಪರಿಹಾರವನ್ನು ನೀಡಿದ್ದ, ಆ ನಿಟ್ಟಿನಲ್ಲಿ ಲಾಹೋರ್ ಕೋರ್ಟ್ ಬುಧವಾರ ಡೇವಿಸ್‌ನನ್ನು ಖುಲಾಸೆಗೊಳಿಸಿತ್ತು. ನಂತರ ಅಮೆರಿಕದ ವೈಮಾನಿಕ ಪಡೆ ವಿಮಾನ ಡೇವಿಸ್ ಸೇರಿದಂತೆ 12 ಮಂದಿಯನ್ನು ಅಫ್ಘಾನಿಸ್ತಾನಕ್ಕೆ ಕರೆದೊಯ್ದಿರುವುದಾಗಿ ವರದಿ ವಿವರಿಸಿದೆ.
ಡೇವಿಸ್‌ನಿಂದ ಹತ್ಯೆಗೊಳಗಾದ ಕುಟುಂಬಿಕರು ನಿನ್ನೆ ಖುದ್ದಾಗಿ ಕೋರ್ಟ್‌ಗೆ ಹಾಜರಾಗಿ ಆತನನ್ನು ಕ್ಷಮಿಸಿರುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ ಇಸ್ಲಾಮಿಕ್‌ನ ಶರಿಯಾ ಕಾನೂನು ಪ್ರಕಾರ ಮೃತ ಕುಟುಂಬದ ಸದಸ್ಯರಿಗೆ ಪರಿಹಾರದ ಹಣವನ್ನು ಡೇವಿಸ್ ಸಂದಾಯ ಮಾಡಿದ್ದ.
ಡೇವಿಸ್ (36), ಲಾಹೋರ್‌ನಲ್ಲಿ ಜನವರಿ 27ರಂದು ಮೋಟಾರ್ ಸೈಕಲ್‌ನಲ್ಲಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ದರೋಡೆ ಮಾಡಲು ಯತ್ನಿಸಿದಾಗ ತಾನು ಗುಂಡು ಹಾರಿಸಿರುವುದಾಗಿ ಡೇವಿಸ್ ತಿಳಿಸಿದ್ದ. ಸ್ವಯಂ ರಕ್ಷಣೆಗೆ ಈ ರೀತಿಯ ಕ್ರಮ ಅನಿವಾರ್ಯವಾಗಿತ್ತು ಎಂದು ಡೇವಿಸ್ ಸಮರ್ಥನೆ ನೀಡಿದ್ದ. ಆದರೂ ಅಷ್ಟರಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡೇವಿಸ್‌ನನ್ನು ಬಂಧಿಸಿದ್ದರು.
ಏತನ್ಮಧ್ಯೆ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉದ್ಭವಿಸಿತ್ತು. ಅಲ್ಲದೇ ಪಾಕಿಸ್ತಾನದಲ್ಲಿನ ಉಗ್ರರ ಬಗ್ಗೆ ಮಾಹಿತಿ ಸಂಗ್ರಹಿಸಲು ಸಿಐಎ ಡೇವಿಸ್‌ನನ್ನು ಗುತ್ತಿಗೆದಾರರನ್ನಾಗಿ ಮಾಡಿಕೊಂಡಿರುವ ಅಂಶವೂ ಬಯಲಾಗಿತ್ತು.
ಡೇವಿಸ್ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಧಾನಿ, ಅಧ್ಯಕ್ಷರ ಹಾಗೂ ವಿದೇಶಾಂಗ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಎಲ್ಲ ಬೆಳವಣಿಗೆ ಹಿಂದೆ ಪಾಕಿಸ್ತಾನದ ಐಎಸ್ಐ ದೊಡ್ಡ ಪ್ರಮಾಣದ ಒಳ ವ್ಯವಹಾರ ನಡೆಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.