ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ನಾಗರಿಕರ ಹತ್ಯೆ; ಲಿಬಿಯಾ ಮೇಲೆ ಅಮೆರಿಕಾ, ಫ್ರಾನ್ಸ್‌ ದಾಳಿ (Libya | Muammar Gaddafi | US | France)
ಕೊಟ್ಟ ಎಚ್ಚರಿಕೆಗಳನ್ನು ಧಿಕ್ಕರಿಸಿದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿಯ ಅಂತಿಮ ದಿನಗಳು ಆರಂಭವಾಗಿವೆ. ನಾಗರಿಕರ ಮೇಲೆಯೇ ಯುದ್ಧ ಸಾರಿರುವ ಗಡಾಫಿಯ ಕ್ರೌರ್ಯವನ್ನು ಅದೇ ರೀತಿಯಲ್ಲಿ ಮಟ್ಟ ಹಾಕಲು ಮುಂದಾಗಿರುವ ಅಮೆರಿಕಾ ನೇತೃತ್ವದ ವಿದೇಶಿ ಪಡೆಗಳು, ಲಿಬಿಯಾ ಕರಾವಳಿ ಮೇಲೆ ವಾಯು ದಾಳಿ ಹಾಗೂ ಸಾಗರದ ಮೂಲಕ ದಾಳಿ ಆರಂಭಿಸಿವೆ.

ಶನಿವಾರವೇ ಪಾಶ್ಚಾತ್ಯ ಪಡೆಗಳು ದಾಳಿ ಆರಂಭಿಸಿವೆ. ಗಡಾಫಿ ಪಡೆಗಳು ನಾಗರಿಕರ ಮೇಲೆ ನಡೆಸುತ್ತಿರುವ ದಾಳಿಯನ್ನು ತಡೆಯುವುದು ಮತ್ತು ಕದನ ವಿರಾಮ ಘೋಷಿಸಲು ಒತ್ತಡ ಹೇರುವ ನಿಟ್ಟಿನಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ.

ಲಿಬಿಯಾ ದೂರದರ್ಶನ ವರದಿಯ ಪ್ರಕಾರ, ವಿದೇಶಿ ಪಡೆಗಳ ದಾಳಿಯಿಂದಾಗಿ ಇದುವರೆಗೆ 48 ಮಂದಿ ಬಲಿಯಾಗಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭಾನುವಾರ ಬೆಳಗ್ಗೆ ಮತ್ತೆ ದಾಳಿ ನಡೆಸಲಾಗಿದೆ.

ಅಮೆರಿಕಾ, ಬ್ರಿಟನ್, ಫ್ರಾನ್ಸ್, ಕೆನಡಾ, ಇಟಲಿ ಸೇರಿದಂತೆ ಹತ್ತಾರು ದೇಶಗಳು ಲಿಬಿಯಾ ರಕ್ಷಣೆಗೆ ಮುಂದಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. ಈ ನಿಟ್ಟಿನಲ್ಲಿ ಮೊದಲು ಕಾಣಿಸಿಕೊಂಡದ್ದು ಫ್ರಾನ್ಸ್ ಯುದ್ಧ ವಿಮಾನಗಳು. ಲಿಬಿಯಾ ಪೂರ್ವದಲ್ಲಿನ ಬೆಂಗಝಿ ಪ್ರಾಂತ್ಯದ ಮೇಲೆ ದಾಳಿ ನಡೆಸಿದ ಫ್ರಾನ್ಸ್, ಗಡಾಫಿ ಪಡೆಯ ಯುದ್ಧ ಟ್ಯಾಂಕುಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಧ್ವಂಸಗೊಳಿಸಿತು.

ಗಡಾಫಿ ಪಡೆಗಳ ವಶದಲ್ಲಿರುವ ರಾಜಧಾನಿ ಟ್ರಿಪೋಲಿ ಮತ್ತು ಪಶ್ಚಿಮ ನಗರ ಮಿಸ್ರತಾಗಳನ್ನು ಬಂಧ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಮೆರಿಕಾ ಮತ್ತು ಬ್ರಿಟನ್‌ಗಳಿಗೆ ಸೇರಿದ ಯುದ್ಧ ಹಡಗುಗಳು ಮತ್ತು ಜಲಾಂತರ್ಗಾಮಿಗಳು 110 ಕ್ಷಿಪಣಿ ದಾಳಿಗಳನ್ನು ನಡೆಸಿವೆ.

ಗಡಾಫಿಯ ಸರ್ವಾಧಿಕಾರ ಮತ್ತು ದೌರ್ಜನ್ಯದ ಮೇಲೆ ಫ್ರಾನ್ಸ್, ಬ್ರಿಟನ್, ಅಮೆರಿಕಾ ಮತ್ತು ಅರಬ್ ದೇಶಗಳು ಕೆಂಗಣ್ಣು ಬೀರಿರುವುದನ್ನು ಲಿಬಿಯಾ ನಾಗರಿಕರು ಸ್ವಾಗತಿಸಿದ್ದಾರೆ. ಆದರೆ ಗಡಾಫಿ ನಾಗರಿಕರ ಮೇಲೆ ತನ್ನ ದ್ವೇಷವನ್ನು ತೀರಿಸಿಕೊಳ್ಳಬಹುದು ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

ಗಡಾಪಿ ಪಡೆಗಳ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಬಗ್ಗೆ ಅರಬ್ ನಾಯಕರು, ಆಫ್ರಿಕಾ, ಅಮೆರಿಕಾ, ಬ್ರಿಟನ್, ಫ್ರಾನ್ಸ್, ಇಟಲಿ, ರಷ್ಯಾ, ಚೀನಾ ಮುಂತಾದ ದೇಶಗಳ ನಾಯಕರು ಪ್ಯಾರಿಸ್‌ನಲ್ಲಿ ಶನಿವಾರ ಚರ್ಚೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿತ್ತು.

22 ದೇಶಗಳ ಮುಖಂಡರು ಸಭೆ ನಡೆಸಿ ಮಿಲಿಟರಿ ಕಾರ್ಯಾಚರಣೆ ನಡೆಸುವ ತೀರ್ಮಾನಕ್ಕೆ ಬಂದಿದ್ದರು. ನಾಗರಿಕರ ಹತ್ಯಾಕಾಂಡವನ್ನು ತಡೆಯಲು ನಾವು ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ ಎಂದು ವಿಶ್ವ ನಾಯಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಲಿಬಿಯಾದಲ್ಲಿ ಪ್ರತಿಭಟನಾಕಾರರನ್ನು ಕೊಲ್ಲಲಾಗುತ್ತಿದೆ. ನಾಗರಿಕರ ಮೇಲೆಯೇ ಯುದ್ಧ ಸಾರಲಾಗಿದೆ. ಕದನ ವಿರಾಮ ಜಾರಿಗೆ ತರುವಂತೆ ಸೂಚಿಸಿದರೂ, ಗಡಾಫಿ ಆಡಳಿತವು ಧಿಕ್ಕರಿಸಿದೆ. ಹಾಗಾಗಿ ವಿಶ್ವಸಂಸ್ಥೆಯ ಸೂಚನೆಯನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ತಾವು ಕಾರ್ಯಾಚರಣೆಗೆ ಇಳಿದಿದ್ದೇವೆ ಎಂದು ಹೇಳಿದರು.
ಇವನ್ನೂ ಓದಿ